ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ನೀತಿ, ಸಚಿವಾಲಯ ಸ್ಥಾಪನೆಗೆ ಪ್ರಯತ್ನ: ಡಾ.ಆರತಿ ಕೃಷ್ಣ
ಉಡುಪಿ: ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ದಿಂದ ವಿದೇಶದಲ್ಲಿ ದುಡಿಯುವ ಬಹಳಷ್ಟು ಅನಿವಾಸಿ ಕನ್ನಡಿಗರು ತಮ್ಮ ಕುಟುಂಬಗಳ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ. ಆದುದರಿಂದ ಅನಿವಾಸಿ ಕನ್ನಡಿಗರ ಮತ್ತು ಅವರ ಕುಟುಂಬದ ಸುರಕ್ಷತೆಗಾಗಿ ಪ್ರತ್ಯೇಕ ನೀತಿ ಮತ್ತು ಸಚಿವಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಹೇಳಿದ್ದಾರೆ.
ಕೊಲೆ ನಡೆದ ನೇಜಾರಿನ ತೃಪ್ತಿ ಲೇಔಟ್‌ನಲ್ಲಿರುವ ಮನೆಗೆ ರವಿವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದ ಬಳಿಕ ಅವರು ಮಾಧ್ಯಮದ ವರೊಂದಿಗೆ ಮಾತನಾಡುತ್ತಿದ್ದರು. ನೂರ್ ಮುಹಮ್ಮದ್ ಅವರು ಕೂಡ ಒಬ್ಬರು ಅನಿವಾಸಿ ಕನ್ನಡಿಗರು. ಕುಟುಂಬ ಹಾಗೂ ಮಕ್ಕಳಿಗಾಗಿ ಅವರು ಸೌದಿ ಅರೇಬಿಯಾದಲ್ಲಿ ದುಡಿಯುತ್ತಿದ್ದರು. ಇವರ ಮನೆಯಲ್ಲಿ ನಡೆದ ದುರ್ಘಟನೆ ಯಿಂದ ಇವರ ಹಾಗೆ ಹೊರದೇಶದಲ್ಲಿ ದುಡಿಯುವ ಅನಿವಾಸಿ ಕನ್ನಡಿಗರು ತಮ್ಮ ಕುಟುಂಬಗಳ ಬಗ್ಗೆ ಆತಂಕ್ಕೀಡಾಗಿದ್ದಾರೆ ಎಂದರು.
ಈ ಪ್ರಕರಣದಲ್ಲಿ ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ನಾನು ಹೋರಾಟ ಮಾಡುತ್ತೇನೆ. ಈ ಸಂಬಂಧ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸುತ್ತೇನೆ. ಕುಟುಂಬದವರ ಬೇಡಿಕೆಯಂತೆ ಪ್ರಕರಣದ ವಿಚಾರಣೆಗಾಗಿ ತ್ವರಿತ ನ್ಯಾಯಾಲಯ ಸ್ಥಾಪನೆ ಮತ್ತು ವಿಶೇಷ ಸರಕಾರಿ ಅಭಿಯೋಜಕರ ನೇಮಕ ಕುರಿತು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡುತ್ತೇನೆ. ಕುಟುಂಬದವರ ಬೇಡಿಕೆ ಯಂತೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತೇನೆ ಎಂದು ಅವರು ತಿಳಿಸಿದರು.
ಕುಟುಂಬದಿಂದ ಮನವಿ: ಈ ಸಂದರ್ಭದಲ್ಲಿ ಡಾ.ಆರತಿ ಕೃಷ್ಣ ಅವರಿಗೆ ನೂರ್ ಮುಹಮ್ಮದ್ ಮನವಿಯನ್ನು ಸಲ್ಲಿಸಿ, ತ್ವರಿತ ನ್ಯಾಯಾಲಯ ಸ್ಥಾಪಿಸಿ, ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಕ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಎ.ಗಫೂರ್, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ನೂರು ಮುಹಮ್ಮದ್ ಕುಟುಂಬದ ಅಶ್ರಫ್ ಕೆ., ಫಾತಿಮಾ ಅಸ್ಬಾ ಮೊದಲಾದವರು ಉಪಸ್ಥಿತರಿದ್ದರು.
ಅನಿವಾಸಿ ಕನ್ನಡಿಗರ ಬಗ್ಗೆ ಅಂಕಿಅಂಶ ಸಂಗ್ರಹ
ಹೊರ ದೇಶದಲ್ಲಿ ದುಡಿಯುವ ಕನ್ನಡಿಗರು ಮತ್ತು ಊರಲ್ಲಿ ಇರುವ ಅವರ ಕುಟುಂಬಗಳ ಬಗ್ಗೆ ಮಾಹಿತಿ ಮತ್ತು ದಾಖಲೆ ಯನ್ನು ಸಂಗ್ರಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಅದೆಲ್ಲ ಸಿದ್ಧಗೊಂಡ ಬಳಿಕ ಆ ಅಂಕಿಅಂಶಗಳ ಆಧಾರ ದಲ್ಲಿ ಅವರಿಗಾಗಿ ಯೋಜನೆ ರೂಪಿಸಲಾಗುವುದು ಎಂದು ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ತಿಳಿಸಿದರು.
ಕಳೆದ ಐದು ವರ್ಷಗಳಿಂದ ಆನಿವಾಸಿ ಭಾರತೀಯ ಸಮಿತಿ ಕರ್ನಾಟಕ ಇದರಲ್ಲಿ ಯಾರು ಇರಲಿಲ್ಲ. ಅದಕ್ಕಿಂತ ಮೊದಲು ಎರಡು ವರ್ಷ ನಾನೇ ಆ ಸಮಿತಿಯಲ್ಲೇ ಉಪಾಧ್ಯಕ್ಷೆ ಆಗಿದ್ದೆ. ಇದೀಗ ಮತ್ತೆ ನಾವು ಅಧಿಕಾರಕ್ಕೆ ಬಂದಿ ದ್ದೇವೆ. ಈ ಭಾಗದ ಹೆಚ್ಚಿನವರು ವಿದೇಶದಲ್ಲಿದ್ದಾರೆ. ಅವರ ಸಮಸ್ಯೆಗಳು ಜಾಸ್ತಿ ಇದೆ. ಕುಟುಂಬವನ್ನು ಬಿಟ್ಟು ಅವರು ಒಬ್ಬರೇ ಹೋಗಿ ಅಲ್ಲಿ ದುಡಿಯುತ್ತಿದ್ದಾರೆ. ಆದುದರಿಂದ ಅವರ ಕುಟುಂಬಕ್ಕೆ ಕೊಡಬೇಕಾಗಿರುವುದು ನಮ್ಮ ಜವಾಬ್ದಾರಿ ಯಾಗಿದೆ ಎಂದರು.