ರೂಬಿಕ್ ಕ್ಯೂಬ್‌ನಲ್ಲಿ ದ್ವಿಮುಖ ಚಿತ್ರ ರಚಿಸಿ ಗಿನ್ನಿಸ್ ದಾಖಲೆ ಸೃಷ್ಟಿಸಿದ ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳು
ಕುಂದಾಪುರ, ಡಿ.1: ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳು ಸಂಸ್ಥೆಯ ಸ್ಥಾಪನೆಯ ರಜತ ಮಹೋತ್ಸವದ ಸಂಭ್ರಮದಂಗವಾಗಿ ಇಂದು ರೂಬಿಕ್ ಕ್ಯೂಬ್‌ನಲ್ಲಿ ಭಾರತದ ಹಾಕಿ ದಂತಕತೆ ಮೇ.ಧ್ಯಾನ್‌ಚಂದ್ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರ ದ್ವಿಮುಖ ಚಿತ್ರವನ್ನು ರಚಿಸುವ ಮೂಲಕ ನೂತನ ಗಿನ್ನಿಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು.
ಶಾಲೆಯ ವಿದ್ಯಾರ್ಥಿಗಳು ನ.30ರಿಂದ ಡಿ.3ರವರೆಗೆ ಒಟ್ಟು 4 ದಿನಗಳ ಕಾಲ ರೂಬಿಕ್ ಕ್ಯೂಬ್‌ನಲ್ಲಿ ವಿಭಿನ್ನ ಚಿತ್ರ ಮೂಡಿಸುವ ಮೂಲಕ ಎರಡು ಹೊಸ ಗಿನ್ನಿಸ್ ವಿಶ್ವ ದಾಖಲೆ ಬರೆಯುವ ಕಾರ್ಯಕ್ರಮದಲ್ಲಿ ಇದೀಗ ಮೊದಲ ದಾಖಲೆಯನ್ನು ಸ್ಥಾಪಿಸಿದ್ದಾರೆ. ನಾಳೆಯಿಂದ ಎರಡು ದಿನ ಅವರು ಇನ್ನೊಂದು ಗಿನ್ನಿಸ್ ದಾಖಲೆಗೆ ಪ್ರಯತ್ನಿಸಲಿದ್ದಾರೆ.
ಶಾಲೆಯ 50 ಮಕ್ಕಳು 6 ಸಾವಿರ ರೂಬಿಕ್ ಕ್ಯೂಬ್‌ಗಳನ್ನು ಬಳಸಿ ಒಟ್ಟು 19.198 ಚ.ಮೀ.ನ ಅಳತೆಯಲ್ಲಿ ಭಾರತದ ಹಾಕಿ ಆಟಗಾರ ಮೇ. ಧ್ಯಾನ್ ಚಂದ್ ಚಿತ್ರವನ್ನು ಒಂದು ಬದಿಗೆ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಇನ್ನೊಂದು ಬದಿಗೆ ಇರುವ ದ್ವಿಮುಖ ಚಿತ್ರ ಬಿಡಿಸಿದರು.
ಗಿನ್ನಿಸ್ ಸಂಸ್ಥೆಯ ಅಜ್ಯೂರಿಕೇಟರ್ ರಿಷಿನಾಥ ಅವರು ಇದಕ್ಕೆ ಪ್ರತ್ಯಕ್ಷದರ್ಶಿ ಯಾಗಿದ್ದು, ವಿದ್ಯಾರ್ಥಿಗಳ ಸಾಧನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ದಾಖಲೆಯ ಪ್ರಮಾಣಪತ್ರ ನೀಡಿದರು. ಇದಕ್ಕೆ ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ 16 ಗಜೆಟೆಡ್ ಶ್ರೇಣಿಯ ಅಧಿಕಾರಿಗಳು ಸಾಕ್ಷಿಗಳಾಗಿದ್ದರು.
ಇದರಲ್ಲಿ ಈಗಿನ ದಾಖಲೆ ಇರುವುದು ಕಝೂಕಿಸ್ತಾನದ ಝೇಂಗಿಸ್ ಐಟ್ಟಾನೋವ್ 5100 ರೂಬಿಕ್ ಕ್ಯೂಬ್‌ಗಳಿಂದ 15.878 ಚದರ ಮೀ.ಅಳತೆಯಲ್ಲಿ ಕ್ಯೂಬ್‌ನ ಎರಡೂ ಬದಿಗಳಲ್ಲಿ ರಚಿಸಿದ ಚಿತ್ರಗಳದ್ದು. ಹಟ್ಟಿಯಂಗಡಿಯ ಮಕ್ಕಳು ಆರು ಸಾವಿರ ಕ್ಯೂಬ್‌ಗಳಲ್ಲಿ 19.198 ಚದರ ಮೀ. ಅಳತೆಯಲ್ಲಿ ಚಿತ್ರ ರಚಿಸುವ ಮೂಲಕ ಇದನ್ನು ಮುರಿದರು. ಇದರಲ್ಲಿ ಚಿತ್ರದ ಅಳತೆ ಮಾತ್ರ ದಾಖಲೆಗೆ ಪರಿಗಣನೆಗೆ ಬಂದಿದೆ.
ನಾಳೆಯಿಂದ ಶಾಲೆಯ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಸೇರಿ ರೋಟೇಟಿಂಗ್ ಫಸಲ್ ಕ್ಯೂಬ್ ಮೊಸಾಯಿಕ್‌ನಲ್ಲಿ ಸಿದ್ಧಿವಿನಾಯಕ ವಸತಿ ಶಾಲೆಯ ಸಂಸ್ಥಾಪಕರಾದ ವೇದಮೂರ್ತಿ ಎಚ್.ರಾಮಚಂದ್ರ ಭಟ್ ಅವರ ಚಿತ್ರ ರಚಿಸಲಿದ್ದಾರೆ. ಈ ಮೂಲಕ ಲಂಡನ್‌ನಲ್ಲಿ ಸದ್ಯ ಇರುವ 308 ಮಂದಿ ಪಾಲ್ಗೊಳ್ಳುವಿಕೆಯ ದಾಖಲೆ ಮುರಿಯಲಿದ್ದಾರೆ.
ಇಂದಿನ ದಾಖಲೆಯ ಸಂದರ್ಭದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಸಂಸ್ಥೆ ಉಪಾಧ್ಯಕ್ಷ ವೇ.ಮೂ. ಬಾಲಚಂದ್ರ ಭಟ್, ಶಾಲಾ ಪ್ರಾಂಶುಪಾಲ ಶರಣ ಕುಮಾರ್, ಆಡಳಿತಾಧಿಕಾರಿ ವೀಣಾರಶ್ಮಿ, ಉಪಪ್ರಾಂಶುಪಾಲ ರಾಮದೇವಾಡಿಗ, ರೂಬಿಕ್ ಕ್ಯೂಬ್‌ನಲ್ಲಿ ಮಕ್ಕಳಿಗೆ ತರಬೇತಿ ನೀಡಿದ ರೂಬಿಕ್ ಕ್ಯೂಬ್‌ನಲ್ಲಿ ಗಿನ್ನಿಸ್ ದಾಖಲೆ ಹೊಂದಿರುವ ಪೃಥ್ವೀಶ್ ಕೆ. ಉಪಸ್ಥಿತರಿದ್ದರು.