ಕರ್ತವ್ಯ ನಿರತ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಡಿ.ಎಫ್.ಓ

Update: 2023-10-19 06:52 GMT

ಕುಂದಾಪುರ: ಕುಂದಾಪುರದ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಅಶೋಕ್ ಅವರನ್ನು ಕುಂದಾಪುರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ. ನಾಯಕ್ ಭೇಡಿ ಮಾಡಿದರು.

ಅರಣ್ಯ ಇಲಾಖೆಯ ಕಚೇರಿಯಲ್ಲಿ ಕಳೆದ 14 ವರ್ಷದಿಂದ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ ಅಶೋಕ್ ಅವರ ಮೇಲೆ ಬುಧವಾರ ಸಂಜೆ ನಾಲ್ವರು ಹಲ್ಲೆ ನಡೆಸಿದ್ದರು.

ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಅಶೋಕ್ ಅವರ ಆರೋಗ್ಯ ವಿಚಾರಿಸಿದ ಡಿ.ಎಫ್.ಓ ಉದಯ್ ಅವರು, ಕರ್ತವ್ಯದಲ್ಲಿರುವಾಗ ನಡೆದ ಹಲ್ಲೆ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳ ಮೇಲೆ ಕಾನೂನು ಕ್ರಮಕ್ಕೆ ಈಗಾಗಾಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ಮಾತನಾಡಲಾಗಿದೆ. ಇಲಾಖೆ ನಿಮ್ಮೊಂದಿಗಿದೆ ಎಂದು ಧೈರ್ಯ ಹೇಳಿದರು.

ಈ ಸಂದರ್ಭ ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ. ಕಿರಣ್ ಬಾಬು, ಉಪವಲಯ ಅರಣ್ಯಾಧಿಕಾರಿಗಳಾದ ಬಿ. ಉದಯ್, ಗುರುರಾಜ್, ಶರತ್, ದಿಲೀಪ್, ಸುನೀಲ್, ಪ್ರಥಮ ದರ್ಜೆ ಸಹಾಯಕ ಸತೀಶ್, ಕಚೇರಿ ಸಿಬ್ಬಂದಿಗಳಿದ್ದರು.

ಘಟನೆ ಹಿನ್ನೆಲೆ:

ಕುಂದಾಪುರ ಅರಣ್ಯ ಇಲಾಖೆಯವರು ಅಕ್ರಮ ಮರ ಸಾಗಾಟದ ಲಾರಿಯನ್ನು ಹಿಡಿದು ಕೇಸು ಮಾಡಿದ್ದು ಈ ಬಗ್ಗೆ ಮಾಹಿತಿಯನ್ನು ಚಾಲಕ ಅಶೋಕ್ ನೀಡಿರುವುದಾಗಿ ತಿಳಿದ ಆರೋಪಿಗಳು ಈ ಕೃತ್ಯ ನಡೆಸಿದ್ದರು. ಕುಂದಾಪುರ ವಲಯ ಅರಣ್ಯಾಧಿಕಾರಿ ಕಛೇರಿಯ ಆವರಣದ ಒಳಗೆ ಆರೋಪಿಗಳಾದ ವಿನೋದ್, ಇಮ್ತಾಜ್ ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳು ಹಲ್ಲೆ‌ನಡೆಸಿ, ಜೀವ ಬೆದರಿಕೆ ಹಾಕಿದ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಕಲಂ 341, 353, 323, 506 ಜೊತೆಗೆ 34ರಂತೆ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News