ಹುಟ್ಟಿದ ದಿನದಂದೇ ನಿಧನರಾದ ಉದ್ಯಾವರ ಗ್ರಾಪಂ ಮಾಜಿ ಅಧ್ಯಕ್ಷೆ
Update: 2024-10-26 12:48 IST

ಉಡುಪಿ, ಅ.26: ಹಿರಿಯ ಕಾಂಗ್ರೆಸ್ ಕಾರ್ಯಕರ್ತೆ, ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಉದ್ಯಾವರ ಅಂಕುದ್ರು ನಿವಾಸಿ ಸರಳಾ ಕೋಟ್ಯಾನ್(75) ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು.
40ಕ್ಕೂ ಅಧಿಕ ವರ್ಷಗಳಿಂದ ಗ್ರಾಮೀಣ ಕಾಂಗ್ರೆಸ್ ಪದಾಧಿಕಾರಿಯಾಗಿ, ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದ ಸರಳಾ ಕೋಟ್ಯಾನ್, ಎರಡು ಬಾರಿ ಪಂಚಾಯತ್ ಸದಸ್ಯರಾಗಿ ಚುನಾಯಿತರಾಗಿದ್ದರು. ಒಂದು ಅವಧಿಗೆ ಕೆಎಫ್ ಡಿಸಿ ಸದಸ್ಯರಾಗಿದ್ದರು. 1995 -98ರ ಅವಧಿಗೆ ಉದ್ಯಾವರ ಗ್ರಾಪಂ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು.
ಅ.26 ಅವರ 75ನೇ ವರ್ಷದ ಹುಟ್ಟಿದ ದಿನ. ಅಮೃತೋತ್ಸವದ ಜನ್ಮದಿನದಂದೇ ಸರಳಾ ಕೋಟ್ಯಾನ್ ಕೊನೆಯುಸಿರೆಳೆದಿದ್ದಾರೆ.
ಮೃತರು ಇಬ್ಬರು ಪುತ್ರರು, ಮೊಮ್ಮಕ್ಕಳು, ಸಹೋದರರು - ಸಹೋದರಿ, ಕುಟುಂಬಸ್ಥರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.