ಪೂರ್ಣಪ್ರಜ್ಞ ಕಾಲೇಜಿನ ಆತಿಥೇಯತ್ವದಲ್ಲಿ ನಾಲ್ಕು ದಿನಗಳ ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ ಟೂರ್ನಿಗೆ ಚಾಲನೆ

Update: 2023-11-23 13:37 GMT

ಉಡುಪಿ : ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಜಂಟಿ ಆಶ್ರಯದಲ್ಲಿ ನಾಲ್ಕು ದಿನಗಳ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಟೂರ್ನಿಗೆ ಪೂರ್ಣಪ್ರಜ್ಞ ಕಾಲೇಜಿನ ಕ್ರೀಡಾಂಗಣದಲ್ಲಿ ಇಂದು ಚಾಲನೆ ನೀಡಲಾಯಿತು.

ದೇಶದ ನಾಲ್ಕು ವಲಯಗಳಿಂದ ಅಗ್ರಸ್ಥಾನ ಪಡೆದ ತಲಾ ನಾಲ್ಕು ತಂಡಗಳಂತೆ ಒಟ್ಟು 16 ತಂಡಗಳು ಭಾಗವಹಿಸುವ ಈ ಟೂರ್ನಿಯನ್ನು ಉಡುಪಿ ಶ್ರೀಅದಮಾರು ಮಠ ಶಿಕ್ಷಣ ಸಂಸ್ಥೆ ಬೆಂಗಳೂರು ಇದರ ಅಧ್ಯಕ್ಷರಾಗಿರುವ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಮನುಷ್ಯನ ಮಾನಸಿಕ ಆರೋಗ್ಯಕ್ಕೆ ದೇಹ ಆರೋಗ್ಯಪೂರ್ಣವಾಗಿ ರಬೇಕು. ಇದಕ್ಕೆ ಕಬಡ್ಡಿಯಂಥ ಆಟೋಟ ಚಟುವಟಿಕೆ ಗಳು ಕಾರಣವಾಗಿ ರುತ್ತದೆ. ಪೂರ್ಣಪ್ರಜ್ಞ ಸಂಸ್ಥೆ ಇಂಥ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಸ್ವಾಮೀಜಿ ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿಯ ಉಪಕುಲಪತಿ ಪ್ರೊ. ಜಯರಾಜ್ ಅಮೀನ್ ಮಾತನಾಡಿ, ಕ್ರೀಡೆ ಎಂಬುದು ಜಾತಿ, ಮತ, ಧರ್ಮ, ನಂಬಿಕೆ ಸೇರಿದಂತೆ ಎಲ್ಲಾ ಚೌಕಟ್ಟುಗಳನ್ನು ಮೀರಿ ನಿಂತಿದೆ. ಅದರಲ್ಲೂ ಕಬಡ್ಡಿ ಆಕ್ರಮಣ ಹಾಗೂ ರಕ್ಷಣೆ ಎರಡನ್ನೂ ಸಮ್ಮಿಳಿತಗೊಂಡ ಕ್ರೀಡೆ. ಇದರಲ್ಲಿ ಚುರುಕಿನ ಕಣ್ಣು, ದೈಹಿಕ ಕ್ಷಮತೆ, ಕ್ಷಣದಲ್ಲೇ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬೇಕಾಗುತ್ತದೆ. ದೇಶದ ನಾಲ್ಕು ದಿಕ್ಕುಗಳಿಂದ ಬಂದಿರುವ ವಿದ್ಯಾರ್ಥಿ ಕ್ರೀಡಾಪಟು ಗಳು ಕ್ರೀಡಾಮನೋಭಾವದೊಂದಿಗೆ ಆಡುವಂತಾಗಲಿ ಎಂದರು.

ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಹೊಸದಿಲ್ಲಿಯ ಅರ್ಜುನ ಪ್ರಶಸ್ತಿ ವಿಜೇತ ಕಬಡ್ಡಿ ಆಟಗಾರ ರಾಕೇಶ್ ಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ವಿಶ್ವಕಪ್ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಆಟಗಾರ ರಾಕೇಶ್, ಕ್ರೀಡೆಯಲ್ಲಿ ಯಶಸ್ಸಿಗೆ ಸುಲಭದ ಮಾರ್ಗಗಳಿಲ್ಲ. ಆಟಗಾರ ಹೆಚ್ಚೆಚ್ಚು ಪರಿಶ್ರಮಪಟ್ಟಾಗಲೇ ಯಶಸ್ಸು ಆತನಿಗೆ ಒಲಿಯುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮುನಿಯಾಲು ಉದಯಕುಮಾರ್ ಶೆಟ್ಟಿ, ಚಾಂಪಿಯನ್‌ಷಿಪ್‌ನ ಸಂಘಟನಾ ಕಾರ್ಯದರ್ಶಿ ಹಾಗೂ ಮಂಗಳೂರು ವಿವಿ ದೈಹಿ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಮು ಎಲ್, ಸಂಘಟನಾ ಸಮಿತಿಯ ಸಂಚಾಲಕ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್, ಅದಮಾರು ಮಠ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎ.ಪಿ.ಭಟ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಡಾ.ಕಿಶೋರ್‌ಕುಮಾರ್ ಸಿ.ಕೆ. ಮುಂತಾದವರು ಉಪಸ್ಥಿತರಿದ್ದರು.

ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಪ್ರಾಂಶುಪಾಲರಾದ ಡಾ.ರಾಮು ಎಲ್. ವಂದಿಸಿದರು. ಪ್ರಾಧ್ಯಾಪಕರಾದ ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News