ಮೀನುಗಾರಿಕೆ, ಒಳನಾಡು ಮೀನುಗಾರಿಕೆಗೆ ಸರಕಾರದ ನೆರವು ಅಗತ್ಯ: ರಾಜ್ಯ ಮೀನುಗಾರರ ಮಹಾಮಂಡಲ ಅಧ್ಯಕ್ಷ ಮಂಜಪ್ಪ

Update: 2024-02-16 15:57 GMT

ಉಡುಪಿ: ಸರಕಾರದ ಅನುದಾನ, ಸಹಕಾರ ಸಿಗದೆ ಸಹಕಾರಿ ಕ್ಷೇತ್ರ ಕುಂಠಿತಗೊಂಡಿದೆ. ಮೀನುಗಾರಿಕೆ, ಒಳನಾಡು ಮೀನುಗಾರಿಕೆಲ ಅಭಿವೃದ್ಧಿ, ಭವಿಷ್ಯದ ಉದ್ಯೋಗ ಸೃಷ್ಟಿಗೆ ಸರಕಾರದ ಬೆಂಬಲದ ಅಗತ್ಯವಿದೆ ಎಂದು ಮೈಸೂರಿನ ಕರ್ನಾಟಕ ರಾಜ್ಯ ಸಹಕಾರ ಮೀನುಗಾರರ ಮಹಾಮಂಡಳ ಅಧ್ಯಕ್ಷ ಹೆಚ್.ಜಿ.ಮಂಜಪ್ಪ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮೀನುಗಾರರ ಮಹಾಮಂಡಳ ಮೈಸೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆ ಗಳ ಸಹಯೋಗದಲ್ಲಿ ರಾಜ್ಯ ಮೀನುಗಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಕಾರ್ಯದಕ್ಷತೆ ಕುರಿತು ಉಡುಪಿಯ ಹೊಟೇಲ್ ಒಷಿಯನ್ ಪರ್ಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

೧೯೫೬ರಲ್ಲಿ ಮೀನುಗಾರಿಕಾ ಕ್ಷೇತ್ರದಲ್ಲಿ ಒಂದು ಲಕ್ಷ ಮೆಟ್ರಿಕ್ ಟನ್ ಮೀನು ಉತ್ಪಾದನೆಯಾಗುತಿದ್ದರೆ, ಆರು ದಶಕಗಳಲ್ಲಿ ಅದು ೧೨.೨೫ಲಕ್ಷ ಮೆಟ್ರಿಕ್ ಟನ್‌ಗಳಿಗೇರಿದೆ. ಆದರೂ ಮೀನುಗಾರಿಕಾ ಕ್ಷೇತ್ರಕ್ಕೆ, ಮೀನುಗಾರರಿಗೆ ಸರಕಾರದ ಬೆಂಬಲ ದೊರೆಯಬೇಕಿದೆ ಎಂದರು.

ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಕಾರ್ಯದರ್ಶಿ ಲಕ್ಷ್ಮೀಪತಯ್ಯ ಮಾತನಾಡಿ, ಕರಾವಳಿಯಲ್ಲಿ ಸಹಕಾರಿ ವ್ಯವಸ್ಥೆ ವ್ಯವಸ್ಥಿತ ವಾಗಿದ್ದು ಪೈಪೋಟಿ ಎದುರಿಸುತ್ತಿದೆ. ವಿಧಾನಪರಿಷತ್ತಿನಲ್ಲಿ ಸಹಕಾರಿ ಕ್ಷೇತ್ರ ಕ್ಕೊಂದು ಪ್ರಾತಿನಿಧ್ಯದ ಜತೆಗೆ ಸಹಕಾರಿ ವಿವಿ ಸ್ಥಾಪನೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲಾ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕ ವಿ. ಮಹೇಶ್ವರಪ್ಪ ಮಾತನಾಡಿ, ಕರಾವಳಿ ಸಹಕಾರಿ ಕ್ಷೇತ್ರದಲ್ಲಿ ವರ್ಕ್ ಕಲ್ಚರ್ ವಿಭಿನ್ನವಾಗಿದ್ದು ಬದ್ಧತೆ, ಕಾರ್ಯದಕ್ಷತೆ ಶೇ. ೯೦ಕ್ಕಿಂತ ಅಧಿಕವಿದೆ. ಹೀಗಾಗಿ ಇಲ್ಲಿ ಸಹಕಾರ ಕ್ಷೇತ್ರ ಉಳಿದೆಡೆಗಿಂತ ಸದೃಢವಾಗಿದೆ ಎಂದರು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಜ್ಞಾನದ ಬೀಜ ಬಿತ್ತಿದರೆ ನಿರಂತರ ಫಲ ಸಿಗುತ್ತದೆ. ಕಾನೂನು ಬದಲಾವಣೆಗೆ ಅನುಗುಣವಾಗಿ ಆಡಳಿತ ಧರ್ಮ ಪಾಲಿಸಬೇಕು. ಸದಸ್ಯರು, ಸಾರ್ವಜನಿಕರಿ ಗಾಗಿ ಹೋರಾಟ ನಡೆಸಲಾಗುತ್ತಿದ್ದು ಸಹಕಾರಿ ಕ್ಷೇತ್ರದ ಆರೋಗ್ಯಕರ ಬೆಳವಣಿಗೆ, ಜನೋಪಯೋಗಿ ಆಗಬೇಕು. ಸಹಕಾರಿ ಸಂಸ್ಥೆಗಳಿಗೆ ವಿಧಿಸಲಾಗುವ ಜಿಎಸ್‌ಟಿ ದರ ಕನಿಷ್ಠಕ್ಕಿಳಿಸಬೇಕು. ಈ ವಿಷಯದಲ್ಲಿ ಯಾರಿಗೇ ತೊಂದರೆಯಾದರೆ ಹೋರಾಟಕ್ಕೆ ಬದ್ಧ ಎಂದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಸಿಇಒ ಹಾಲಪ್ಪ ಕೋಡಿಹಳ್ಳಿ, ಕರ್ನಾಟಕ ರಾಜ್ಯ ಸಹಕಾರ ಮೀನುಗಾರರ ಮಹಾಮಂಡಳ ನಿರ್ದೇಶಕ ಅಂಜು ಬಾಬು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಹರೀಶ್ ಕಿಣಿ ಅಲೆವೂರು, ಮಂಜಯ್ಯ ಶೆಟ್ಟಿ, ಕಟಪಾಡಿ ಶಂಕರ ಪೂಜಾರಿ, ಮನೋಜ್ ಕರ್ಕೇರ, ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಡಾ. ಗುರುಸ್ವಾಮಿ ಉಪಸ್ಥಿತರಿದ್ದರು.

ಕವಿತಾ, ಪ್ರಮೀಳಾ ಸುರೇಶ್ ಪ್ರಾರ್ಥಿಸಿ, ಪಿ.ಶ್ರೀಧರ್ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News