ಹೆಜಮಾಡಿ ಬೈಪಾಸ್ ಸರ್ವಿಸ್ ರಸ್ತೆ ನಿರ್ಮಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ

Update: 2023-11-11 10:13 GMT

ಪಡುಬಿದ್ರಿ: ಹೆಜಮಾಡಿ ಕನ್ನಂಗಾರ್ ಬೈಪಾಸ್ ಬಳಿ ಸರ್ವಿಸ್ ರಸ್ತೆ ಇಲ್ಲದೆ ಅಪಘಾತಗಳು ಹೆಚ್ಚುತಿದ್ದು, ಏಳು ವರ್ಷಗಳಲ್ಲಿ 54 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಹೆಜಮಾಡಿ ಕನ್ನಂಗಾರ್ ಬೈಪಾಸ್ ಬಳಿ ಸರ್ವೀಸ್ ರಸ್ತೆ ನಿರ್ಮಿಸಬೇಕು ಎಂದು ಹೋರಾಟ ಸಮಿತಿ ಅಧ್ಯಕ್ಷ ಪೌವ್ ರೋಲ್ಸಿ ಡಿ.ಕೋಸ್ತ ಒತ್ತಾಯಿಸಿದ್ದಾರೆ.

ಕಾಪು ಪ್ರೆಸ್‍ ಕ್ಲಬ್‍ ನಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆದ್ದಾರಿಯಿಂದ ಹೆಜಮಾಡಿಯ ಒಳರಸ್ತೆ ಸಂಪರ್ಕಿಸುವುದಕ್ಕೆ ಕನ್ನಂಗಾರು ಬಳಿ ರಸ್ತೆ ವಿಭಜಕ ನಿರ್ಮಿಸಿರುವುದಿಲ್ಲ. ಸುಮಾರು 150 ಮೀಟರ್ ಹಿಂದಕ್ಕೆ ಪಡುಬಿದ್ರಿ ಬೀಡು ಬಳಿಯ ಸುಜ್ಞಾನ್ ಗೇಟ್ ಬಳಿ ಕಾನೂನು ಬಾಹಿರವಾಗಿ ಹೆದ್ದಾರಿಯ ವಿರುದ್ಧ ದಿಕ್ಕಿನಿಂದ ಎಲ್ಲಾ ವಾಹನಗಳು ಸಂಚರಿಸಿ ತೀರಾ ಅಪಾಯಕಾರಿಯಾಗಿ ಹೆಜಮಾಡಿಗೆ ಬರುತ್ತಿವೆ.

ಈ ಹಿನ್ನಲೆಯಲ್ಲಿ ಕನ್ನಂಗಾರ್ ಬೈಪಾಸ್‍ನಿಂದ ಪಡುಬಿದ್ರಿವರೆಗೆ ಸುಮಾರು 350 ಮೀಟರ್ ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ಆ ಸಮಯದಲ್ಲಿ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆ ಹಾಗೂ ಸರಕಾರವನ್ನು ಆಗ್ರಹಿಸಲಾಗಿತ್ತು. ಆ ಬಗ್ಗೆ ಹೆದ್ದಾರಿ ಇಲಾಖೆಯ ಮುಖ್ಯ ಅಧಿಕಾರಿಗಳು ಶೀಘ್ರು ಸರ್ವಿಸ್ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಸರ್ವಿಸ್ ರಸ್ತೆಯ ನಿರ್ಮಾಣದ ಬಗ್ಗೆ ಭರವಸೆ ನೀಡಿ 6 ವರ್ಷ ಸಂದರೂ ಈ ವರೆಗೆ ಸರ್ವಿಸ್ ರಸ್ತೆ ನಿರ್ಮಾಣಗೊಂಡಿಲ್ಲ.

ಈ ನಿಟ್ಟಿನಲ್ಲಿ ಪಡುಬಿದ್ರಿ ಹೆಜಮಾಡಿ ಗ್ರಾಮಸ್ಥರು ಪಡುಬಿದ್ರಿ- ಹೆಜಮಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿಯನ್ನು ರಚಿಸಿ ಸಮಸ್ಯೆ ಶೀಘ್ರ ಪರಿಹಾರಕ್ಕೆ ಆಗ್ರಹಿಸಿ ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದು, ಮನವಿಗೆ ಸ್ಪಂದಿಸಿ ಈ ಸರ್ವಿಸ್ ರಸ್ತೆಯ ಕಾಮಗಾರಿ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಯವರಿಗೆ ಪತ್ರವನ್ನು ಬರೆದಿದ್ದರು. ಅಲ್ಲದೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ವರ್, ಸಭಾಪತಿ ಯು.ಟಿ. ಖಾದರ್ ಸಹಿತ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಮನವಿಗೆ ಸ್ಪಂಧಿಸಿರುವ ಪ್ರಾದೇಶಿಕ ಅಧಿಕಾರಿಯವರು ಗೂಗಲ್ ಮ್ಯಾಪ್ ಮುಖಾಂತರ ವೀಕ್ಷಿಸಿ ಹಾಗೂ ನಮ್ಮ ವಿವರಣೆಯನ್ನು ಪಡೆದುಕೊಂಡು ಅತೀ ಶೀಘ್ರವಾಗಿ ಪಡುಬಿದ್ರಿಯಿಂದ ಕನ್ನಂಗಾರ್ ಬೈಪಾಸ್‍ವರೆಗೆ ಸುಮಾರು 350 ಮೀಟರ್ ಉದ್ದದ ಸರ್ವಿಸ್ ರಸ್ತೆಯನ್ನು ನಿರ್ಮಿಸುವ ಬಗ್ಗೆ ಭರವಸೆ ನೀಡಿದ್ದಾರೆ.

ಈ ಕಾಮಗಾರಿಯ ಅಂದಾಜು ಪಟ್ಟಿಯನ್ನು ತಯಾರಿಸಿ ಸುಮಾರು 4 ರಿಂದ 6 ತಿಂಗಳ ಒಳಗೆ ಡಾಮರ್ ರಸ್ತೆಯನ್ನು ನಿರ್ಮಿಸುವುದು ಹಾಗೂ ಇದೇ ದೀಪಾವಳಿ ಹಬ್ಬದ ನಂತರ ಅತೀ ಶೀಘ್ರವಾಗಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿರುತ್ತಾರೆ.

ಪಡುಬಿದ್ರಿ-ಹೆಜಮಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಕಾನೂನು ಹೋರಾಟ ನಡೆಸುವುದು ಹಾಗೂ ಪಡುಬಿದ್ರಿ ಹಾಗೂ ಹೆಜಮಾಡಿಯ ಸಾರ್ವಜನಿಕರನ್ನು ಸೇರಿಸಿ ಕನ್ನಂಗಾರು ಬೈಪಾಸ್ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಶ್ಯಾ ಮೆಂಡನ್, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಮಾಜಿ ಅಧ್ಯಕ್ಷ ಸುಭಾಸ್ ಜಿ.ಸಾಲ್ಯಾನ್, ಹೆಜಮಾಡಿ ಅಲ್-ಅಝ್ ಹರ್ ಇಂಗ್ಲಿಷ್ ಮೀಡಿಯಂ ಶಾಲೆಯ ಸಮಚಾಲಕ ಹಾಜಿ ಶೇಖಬ್ಬ ಕೋಟೆ ಹೌಸ್, ಹೋರಾಟ ಸಮಿತಿಯ ಕಾರ್ಯದರ್ಶಿ ಸನಾ ಇಬ್ರಾಹೀಂ, ರಾಜು ಹೆಜಮಾಡಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News