ಇಸ್ರೇಲ್‌ನಲ್ಲಿ ಸಿಲುಕಿರುವ ಉಡುಪಿ ಜಿಲ್ಲೆಯ ನೂರಾರು ಮಂದಿ ಸುರಕ್ಷಿತ

Update: 2023-10-09 15:40 GMT

ಉಡುಪಿ, ಅ.9: ಯುದ್ಧಪೀಡಿತ ಇಸ್ರೇಲ್‌ನಲ್ಲಿ ನರ್ಸ್ ಹಾಗೂ ಹೋಮ್ ನರ್ಸ್ ಆಗಿ ದುಡಿಯುತ್ತಿರುವ ಉಡುಪಿ ಜಿಲ್ಲೆ ನೂರಾರು ಮಂದಿ ಸಿಲುಕಿ ಕೊಂಡಿದ್ದು, ಸದ್ಯ ಇವರೆಲ್ಲರೂ ಸುರಕ್ಷಿತರಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಕಟಪಾಡಿ ಶಂಕರಪುರ ಸಮೀಪದ ಸರಕಾರಿಗುಡ್ಡೆಯ ನಿವಾಸಿ ಸುಮಾ ಕಳೆದ ಹಲವು ವರ್ಷಗಳಿಂದ ಇಸ್ರೇಲ್‌ನ ಪ್ರಮುಖ ನಗರ ತೆಲವಿವ್ ಎಂಬಲ್ಲಿ ಆರೈಕೆ(ಕೇರ್ ಗಿವರ್)ದಾರರಾಗಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲಿಂದಲೇ ಇಂದು ದೂರವಾಣಿ ಮೂಲಕ ಪತ್ರಿಕೆಗೆ ಮಾಹಿತಿ ನೀಡಿದ ಅವರು, ಸದ್ಯ ನಾವು ಇಲ್ಲಿ ಸುರತ್ಷಿತ ವಾಗಿದ್ದೇವೆ. ನಾನು ಇರುವ ಮನೆಯಲ್ಲಿ ಒಟ್ಟು ಐದು ಮಂದಿ ಇದ್ದೇವೆ ಎಂದು ತಿಳಿಸಿದರು.

ಇಲ್ಲಿ ಅವಿಭಜಿತ ದ.ಕ. ಜಿಲ್ಲೆಯ ನೂರಾರು ಮಂದಿ ನರ್ಸ್, ಹೋಮ್ ನರ್ಸ್, ಆರೈಕೆದಾರರಾಗಿ ಕೆಲಸ ನಿರ್ವಹಿಸುತ್ತಿ ದ್ದಾರೆ. ಹೊರಗಡೆ ಬಸ್, ಜನ ಓಡಾಟ ಕೂಡ ಇದೆ. ಆದರೆ ಬಾಂಬ್ ಬೀಳುವ ಸದ್ದು ಕೇಳುವಾಗ ಮತ್ತು ಸೈರನ್ ಆಗುವಾಗ ಎಲ್ಲರೂ ಒಳಗೆ ಹೋಗಬೇಕು. ಈಗಾಗಲೇ ಹೆಚ್ಚಿನವರು ಒಂದು ವಾರಕ್ಕೆ ಬೇಕಾದ ವಸ್ತುಗಳನ್ನು ತಂದು ಇಟ್ಟುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಇಲ್ಲಿ ನನ್ನ ಅಕ್ಕ ಅಶಾಲತಾ ಕೂಡ ಇದ್ದಾರೆ. ಊರಿನಲ್ಲಿ ಇಲ್ಲಿ ಪರಿಸ್ಥಿತಿಯ ಬಗ್ಗೆ ಮಾಧ್ಯಮ ದಲ್ಲಿ ತಿಳಿದುಕೊಂಡಿರುವ ಮನೆಯವರು ಆತಂಕದಲ್ಲಿದ್ದಾರೆ. ಆದರೆ ನಾವು ಇಲ್ಲಿ ಸುರಕ್ಷಿತವಾಗಿದ್ದೇವೆ. ಇಲ್ಲಿ ಎಲ್ಲ ಮನೆಗಳಲ್ಲಿಯೂ ಬಂಕರ್ ವ್ಯವಸ್ಥೆ ಇದೆ. ಸೈರನ್ ಆದಾಗ ನಾವು ಬಂಕರ್‌ನಲ್ಲಿ ಹೋಗಿ ಕುಳಿತುಕೊಳ್ಳು ತ್ತಿದ್ದೇವೆ. ಇಲ್ಲಿರುವ ಕೆಲವರಿಗೆ ರಾಯಭಾರಿ ಕಚೇರಿಯಿಂದ ಕರೆ ಬಂದಿದೆ. ಇನ್ನು ಕೆಲವರು ಸ್ಥಳೀಯ ಠಾಣೆಯಿಂದಲೂ ಕರೆ ಬಂದಿದೆ. ಪಾಸ್‌ಪೋರ್ಟ್ ಪ್ರತಿ ಕಳುಹಿಸುವಂತೆ ಸೂಚಿಸಿದ್ದಾರೆ. ಇವತ್ತು ಕೂಡ ಸೈರನ್ ಆಗಿದೆ ಎಂದು ಅವರು ಮಾಹಿತಿ ನೀಡಿದರು.

ಅದೇ ರೀತಿ ಫಲಿಮಾರಿನ ಪ್ರಮೀಳಾ ಡಿಸೋಜ ಕುಟುಂಬ ಕೂಡ ಇಸ್ರೆಲ್ ನಲ್ಲಿ ಸಿಲುಕಿಕೊಂಡಿದೆ ಎಂಬ ಮಾಹಿತಿ ದೊರೆತಿದೆ. ‘ನಾವೆಲ್ಲ ಸುರಕ್ಷಿತವಾಗಿ ಮನೆಯಲ್ಲಿ ಬಂಕರ್‌ನ ಒಳಗೆ ಇದ್ದೇವೆ. ಇಸ್ರೇಲ್ ಸರಕಾರ ರೆಡ್ ಅಲರ್ಟ್ ಘೋಷಿಸಿದೆ. ಒಂದು ವಾರ ನಮಗೆ ರಜೆ ನೀಡಿದೆ. ಮನೆಯಲ್ಲೇ ಇರುವಂತೆ ಸೂಚನೆ ನೀಡಿದೆ. ಹೊರಗಡೆ ಮಾರುಕಟ್ಟೆ, ಕೆಲಸಕ್ಕೆ ಹೋಗದ ಪರಿಸ್ಥಿತಿ ಇದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಣಿಪಾಲ ಸರಳಬೆಟ್ಟು ನಿವಾಸಿ ರಾಜೇಶ್ ಸಾಲಿಯಾನ್, ಪತ್ನಿ ಆಶಾ ಮತ್ತು ಅವರ ಮಗ ಆಶ್ಲೇಷ್ ಕಳೆದ ಹತ್ತು ವರ್ಷಗಳಿಂದ ಇಸ್ರೇಲ್‌ನಲ್ಲಿ ನೆಲೆಸಿದ್ದಾರೆ. ಇವರ ಬಗ್ಗೆ ಮಾಹಿತಿ ನೀಡಿದ ರಾಜೇಶ್ ಸಹೋದರ ಗಣೇಶ್‌ರಾಜ್ ಸರಳೇಬೆಟ್ಟು, ಮನೆಯಲ್ಲಿ ಎಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ. ನಮ್ಮ ಸಹೋದರನ ಕುಟುಂಬ ರಾಕೆಟ್ ಶೆಲ್ ದಾಳಿ ನಡೆದ ಸುಮಾರು 400 ಕಿಲೋಮೀಟರ್ ದೂರದಲ್ಲಿದೆ. ಆದಷ್ಟು ಬೇಗ ಯುದ್ಧ ನಿಲ್ಲಲಿ, ನನ್ನ ಸಹೋದರನ ಕುಟುಂಬ ಬೇಗ ವಾಪಾಸ್ಸು ಬರಲಿ ಎಂದು ಹಾರೈಸಿದರು.

ಸರಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಕ್ರಮ: ಡಿಸಿ

ಉಡುಪಿ ಜಿಲ್ಲೆಯಿಂದ ಹೋಂ ನರ್ಸ್, ನರ್ಸ್‌ಗಳಾಗಿ ಸಾಕಷ್ಟು ಮಂದಿ ತೆರಳಿದ್ದಾರೆ. ಅಲ್ಲಿ ನಮ್ಮವರಿಗೆ ಸಮಸ್ಯೆಯಾದ ಬಗ್ಗೆ ಮಾಹಿತಿ ಬಂದಿಲ್ಲ. ಉಡುಪಿ ಜಿಲ್ಲಾಡಳಿತಕ್ಕೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ತಿಳಿಸಿದ್ದಾರೆ.

ಪರಿಸ್ಥಿತಿ ಅವಲೋಕನ ಮಾಡಿ, ಇನ್ನೆರಡು ದಿನದಲ್ಲಿ ಮಾಹಿತಿ ಬರಬಹುದು. ಅಲ್ಲಿ ಯಾವುದೇ ಸಮಸ್ಯೆಗಳಾಗಿರುವ ಬಗ್ಗೆ ಸ್ಥಳೀಯರು ಕೂಡ ಮಾಹಿತಿ ಕೊಟ್ಟಿಲ್ಲ. ಸರಕಾರ ಅಥವಾ ರಾಯಭಾರಿ ಕಚೇರಿಯಿಂದ ಇವರೆಗೆ ಮಾಹಿತಿಗಳು ಬಂದಿಲ್ಲ. ಸರಕಾರದ ನಿರ್ದೇಶನದಂತೆ ಉಡುಪಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಇಸ್ರೇಲ್‌ನಲ್ಲಿ ಸಂಕಷ್ಟದಲ್ಲಿ ಇರುವವರು ರಾಯಭಾರಿ ಕಚೇರಿಯನ್ನು ಸಂಪರ್ಕ ಮಾಡಬಹುದು. ಅದೇ ರೀತಿ ಕುಟುಂಬ ದವರು ಜಿಲ್ಲಾಡಳಿತಕ್ಕೆ ಅಲ್ಲಿನ ಪರಿಸ್ಥಿತಿಯನ್ನು ತಿಳಿಸಬಹುದು. ಇಸ್ರೇಲ್‌ನಲ್ಲಿ ಎಷ್ಟು ಜನ ಇದ್ದಾರೆ ಅಥವಾ ಸುತ್ತಮುತ್ತಲ ದೇಶದಲ್ಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ನಮ್ಮಲ್ಲಿ ಇಲ್ಲ ಎಂದು ಅವರು ತಿಳಿಸಿದರು.




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News