ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ವ್ಯಕ್ತಿ ಮುಖ್ಯವೇ ಹೊರತು ಪಕ್ಷ ಅಲ್ಲ: ರಘುಪತಿ ಭಟ್

Update: 2024-10-03 14:16 GMT

ರಘುಪತಿ ಭಟ್

ಉಡುಪಿ: ವಿಧಾನ ಪರಿಷತ್ ಚುನಾವಣೆಯಿಂದ ಸರಕಾರಗಳು ನಿರ್ಧಾರ ಆಗುವುದಿಲ್ಲ. ಆದುದರಿಂದ ಈ ಉಪ ಚುನಾವಣೆಯಲ್ಲಿ ಪಕ್ಷ ನೋಡಿ ಮತದಾನ ಮಾಡಬೇಕಾಗಿಲ್ಲ. ಆದುದರಿಂದ ಕರಾವಳಿಯ ಸಮಸ್ಯೆಗಳ ಬಗ್ಗೆ ಅನುಭವ ಇರುವವರನ್ನು ಆಯ್ಕೆ ಮಾಡಬೇಕು ಎಂದು ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷ ನೋಡಿ ಮತದಾನ ಮಾಡಬೇಕು. ಆದರೆ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಆಧಾರದ ಮೇಲೆ ಮತದಾನ ಮಾಡಬೇಕಾಗಿಲ್ಲ. ವ್ಯಕ್ತಿಗಳ ಸಾಧನೆ ನೋಡಿ ಮತದಾನ ಮಾಡಬೇಕು ಎಂದು ತಿಳಿಸಿದರು.

ಕರಾವಳಿಯಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಕಾಂಗ್ರೆಸ್ ಅಭ್ಯರ್ಥಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದರು. ಸಹಕಾರಿ ಧುರಿಣರಾಗಿ ಅನುಭವ ಪಡೆದಿದ್ದಾರೆ. ಆದುದರಿಂದ ಮತದಾರರು ಒಳ್ಳೆಯ ಅಭ್ಯರ್ಥಿ ಯಾರು ಎಂದು ಗಮನಿಸಿ ಮತದಾನ ಮಾಡಬೇಕು ಎಂದರು.

ಉಡುಪಿಯಲ್ಲಿ ಅನೇಕ ಮಂದಿ ಅಭ್ಯರ್ಥಿಗಳಾಗಲು ಸಮರ್ಥರಿದ್ದರು. ವಿಧಾನ ಪರಿಷತ್ ಪದವೀಧರ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಸರಿಯಾಗಿರಲಿಲ್ಲ. ಅಂದು ಸರಿಯಾದ ಮಾನದಂಡ ಪಾಲಿಸಿರಲಿಲ್ಲ. ಆ ಕಾರಣಕ್ಕೆ ನಾನು ಪಕ್ಷೇತರನಾಗಿ ಸ್ಪರ್ಧಿಸಿದ್ದೆ. ಆ ಚುನಾವಣೆಯಲ್ಲಿ ಕರಾವಳಿಗೆ ಪ್ರಾತಿನಿಧ್ಯ ನೀಡಿರಲಿಲ್ಲ. ಹಿರಿಯರನ್ನು ಕಡೆಗಣಿಸಿ ಅವಕಾಶ ವಂಚಿಸಲಾಗಿತ್ತು. ಆದರೆ ಈ ಬಾರಿ ಪಕ್ಷ ಮಾನದಂಡ ಇಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡಿದೆ ಎಂದು ಅವರು ಹೇಳಿದರು.

‘ನನ್ನನ್ನು ಈತನಕ ಬಿಜೆಪಿಯಿಂದ ಯಾರು ಸಂಪರ್ಕ ಮಾಡಿಲ್ಲ ಹಾಗೂ ಮಾತನಾಡಿಸಿಲ್ಲ. ಪಕ್ಷ ನನ್ನನ್ನು ಕರೆದರೆ ಬಿಜೆಪಿ ಸೇರ್ಪಡೆಗೆ ಸಿದ್ಧನಿದ್ದೇನೆ. ನನಗೆ ಯಾರು ಕರೆದಿಲ್ಲ. ಹಾಗಾಗಿ ನಾನು ಸುಮ್ಮನಿದ್ದೇನೆ. ಬಿಜೆಪಿ ಸದಸ್ಯತ್ವ ಅಭಿಯಾನ ದಲ್ಲಿ ಮಿಸ್‌ಕಾಲ್ ಕೊಟ್ಟು ನಾನು ಬಿಜೆಪಿಯ ಸದಸ್ಯ ಆಗಿದ್ದೇನೆ. ಈ ವಿಚಾರದಲ್ಲಿ ಯಾರ ನಿರ್ಬಂಧನೆ ಇಲ್ಲ. ಸ್ಥಾನೀಯ ಸಂಸ್ಥೆಯವರು ಅದನ್ನು ಅನುಮೋದಿಸಬೇಕು. ಅವರು ಅನುಮೋದನೆ ಮಾಡುತ್ತಾರೆಯೇ ಇಲ್ಲವೋ ಗೊತ್ತಿಲ್ಲ’

-ರಘುಪತಿ ಭಟ್, ಮಾಜಿ ಶಾಸಕರು

ಮಹತ್ವ ಪಡೆದ ರಘುಪತಿ ಭಟ್ ಹೇಳಿಕೆ!

ವಿಧಾನ ಪರಿಷತ್ ಉಪಚುನಾವಣೆಯಲ್ಲಿ ರಘುಪತಿ ಭಟ್ ಬೆಂಬಲಿಗರು ನಿರ್ಣಾಯಕ ಪಾತ್ರ ವಹಿಸಲಿರುವುದರಿಂದ ಅವರ ಹೇಳಿಕೆ ಬಹಳಷ್ಟು ಮಹತ್ವ ಪಡೆದುಕೊಂಡಿದೆ.

ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿದ್ದ ರಘುಪತಿ ಭಟ್ ಬಿಜೆಪಿಯಿಂದ ಉಚ್ಛಾಟನೆ ಗೊಂಡಿದ್ದರು. ಬಿಜೆಪಿಯನ್ನು ಬೆಂಬಲಿಸಬೇಕೆಂದು ಬಹಿರಂಗವಾಗಿ ಹೇಳದ ರಘುಪತಿ ಭಟ್, ಈ ಮೂಲಕ ಬಿಜೆಪಿಗೆ ಬಿಸಿ ಮುಟ್ಟಿಸಿದ್ದಾರೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News