ಕನ್ನಡ ಭಾಷೆ, ಸಾಹಿತ್ಯ ಪರಂಪರೆ ಉಳಿಸಿ ಬೆಳೆಸುವುದು ಅಗತ್ಯ: ಪ್ರಜ್ಞಾ ಮಾರ್ಪಳ್ಳಿ

Update: 2024-08-23 14:58 GMT

ಕಾಪು, ಆ.23: ಕನ್ನಡ ಭಾಷೆಗೆ 2500 ವರ್ಷಗಳ ಪರಂಪರೆ ಇದೆ. ಭಾಷಾ ಸಾಹಿತ್ಯ ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಹೀಗೆ ಮೂರು ಹಂತಗಳಲ್ಲಿ ಸಮೃದ್ಧವಾಗಿ ಬೆಳೆದ ಭವ್ಯ ಇತಿಹಾಸವನ್ನು ಹೊಂದಿದೆ. ಇದನ್ನು ಉಳಿಸಿ ಬೆಳೆಸಬೇಕಾದರೆ ಮಕ್ಕಳಲ್ಲಿ ಭಾಷಾ ಸಾಹಿತ್ಯವನ್ನು ಓದುವ ಆಸಕ್ತಿ ಬೆಳೆಸಬೇಕು ಎಂದು ಉಡುಪಿ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಉಪನ್ಯಾಸಕಿ ಪ್ರಜ್ಞಾ ಮಾರ್ಪಳ್ಳಿ ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಾಪು ತಾಲೂಕು ಘಟಕದ ವತಿಯಿಂದ ಕಟಪಾಡಿ ಎಸ್‌ವಿಎಸ್ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶುಕ್ರವಾರ ಏರ್ಪಡಿಸಿದ ಪ್ರಬಂಧ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಕನ್ನಡ ನಾಡು, ನುಡಿ, ಪರಂಪರೆಯ ಬಗ್ಗೆ ಅವರು ಉಪನ್ಯಾಸ ನೀಡಿದರು.

ಕನ್ನಡ ಸಾಹಿತ್ಯ ಪರೆಂಪರೆಯನ್ನು ಮುಂದಿನ ಸಮಾಜಕ್ಕೆ ನೀಡುವ ಗುರುತರ ಹೊಣೆ ವಿದ್ಯಾರ್ಥಿಗಳ ಮೇಲಿದೆ. ಪರಂಪರೆಯ ಬಗ್ಗೆ ಪುಸ್ತಕಗಳನ್ನು ಓದುವ ಮೂಲಕ ಭವಿಷ್ಯದ ಸಾಹಿತಿಗಳಾಗಿ ಬೆಳೆಯಬೇಕು ಎಂದು ಅವರು ಕರೆ ನೀಡಿದರು.

ಕಸಾಪ ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಕಟಪಾಡಿ ಎಸ್‌ವಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸತ್ಯೇಂದ್ರ ಪೈ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು.

ಈ ಸಂದರ್ಭ ಸ್ಫರ್ಧೆಗೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದ ಕನ್ನಡ ಭಾಷಾ ಶಿಕ್ಷಕಿ ವಿದ್ಯಾ ಟೀಚರ್‌ರವನ್ನು ಅಭಿನಂದಿಸಲಾ ಯಿತು. ವೇದಿಕೆಯಲ್ಲಿ ಮಹಾರಾಷ್ಟ್ರ ಸರಕಾರದ ನಿವೃತ್ತ ಅಭಿಯಂತ ಉಮೇಶ್ ರಾವ್, ಕಟಪಾಡಿ ಪ್ರೇರಣಾ ಟ್ರಸ್ಟ್ ಸಂಚಾಲಕ ಕೆ.ರಾಘವೇಂದ್ರ ರಾವ್, ಕಸಾಪ ತಾಲೂಕು ಘಟಕದ ಸದಸ್ಯರಾದ ಎಸ್.ಎಸ್.ಪ್ರಸಾದ್, ಡೋಮಿಯನ್ ಆರ್. ನೊರೋನ್ಹಾ ಉಪಸ್ಥಿರಿದ್ದರು.

ಎಸ್‌ವಿಎಸ್ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ತಂತ್ರಿ ಪ್ರಾಸ್ತಾವಿಕ ವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ರಾವ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಪ್ರಾಂಶುಪಾಲ ಅನಂತ ಮೂಡಿತ್ತಾಯ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News