ʼಕಾಂತರಾಜು ವರದಿʼ ವಂಚಿತವರ್ಗಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಗುರಿ ಹೊಂದಿದೆ: ಜಯಪ್ರಕಾಶ್ ಹೆಗ್ಡೆ

Update: 2024-03-26 07:03 GMT

ಕಾರ್ಕಳ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮಂಡಿಸಿರುವ ಕಾಂತರಾಜು ವರದಿ ಪ್ರಜಾತಂತ್ರ ವ್ಯವಸ್ಥೆಯಡಿ ವಂಚಿತವರ್ಗಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಗುರಿ ಹೊಂದಿದೆಯೇ ಹೊರತು, ಸಮಾಜದ ಯಾವುದೇ‌ ವರ್ಗವನ್ನು ಅವಗಣಿಸುವ ಅಸಾಂವಿಧಾನಿಕ ನಿಲುವನ್ನು ಹೊಂದಿಲ್ಲ ಎಂದು ಆಯೋಗದ ಮಾಜಿ ಅಧ್ಯಕ್ಷ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. 

ಅವರು ಇಲ್ಲಿನ ವಿಧಾನ ಸಭಾ ವ್ಯಾಪ್ತಿಯ ಪತ್ತೊಂಜಿ ಕಟ್ಟೆಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಯೋಜಿಸಿರುವ ಕಾರ್ಯಕರ್ತರ ತರಬೇತಿ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದರು.

ಹಿಂದುಳಿದ ವರ್ಗಗಳ ಸಬಲೀಕರಣದ ಗುರಿಯೊಂದಿಗೆ ನಡೆದ ಈ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಹಿನ್ನೆಲೆಯ ಜಾತಿಗಣತಿ ಕೆಲವೊಂದು ಅಸ್ತಿತ್ವವೇ ಇಲ್ಲದಿದ್ದ ವರ್ಗಕ್ಕೆ ಅಸ್ತಿತ್ವವನ್ನು ನೀಡುವ, ಧ್ವನಿ ಇಲ್ಲದ ವರ್ಗಕ್ಕೆ ಧ್ವನಿಸುವ ಶಕ್ತಿ ನೀಡುವಲ್ಲಿ ಯಶಸ್ವಿಯಾಗಲಿದೆ. ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಗುರಿಸಾಧಿಸುವುದರೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನಮ್ಮ ಸರಕಾರದಿಂದ ಮುಂದಿನ ದಿನಗಳಲ್ಲಿ ವರದಿಯ ಪೂರ್ಣ ಅನುಷ್ಠಾನ ನಡೆಯಲಿದೆ ಎಂದರು.

ಕಳೆದ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ, ಕಾಂಗ್ರೆಸ್ ನಾಯಕ ಉದಯಕುಮಾರ್ ಶೆಟ್ಟಿ ಮಾತನಾಡಿ, ನಮ್ಮ ಸರಕಾರ ನೀಡಿರುವ ಐದು ಗ್ಯಾರಂಟಿಗಳು ಸಮಾಜದ ಬಡವರ್ಗಕ್ಕೆ ಆರ್ಥಿಕ ಶಕ್ತಿಯನ್ನು ನೀಡಿದೆ. ಆರ್ಥಿಕತೆ ನಿಂತ ನೀರಲ್ಲ. ಈ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಹಣದ ಹರಿವು ದ್ವಿಗುಣಗೊಂಡಿದೆ. ಪಂಚ ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗಲಿದೆ ಎಂದಿದ್ದ ಬಿಜೆಪಿ ಈಗ ಹತಾಶಗೊಂಡಿದೆ. ಗ್ಯಾರಂಟಿಯ ಶಾಶ್ವತ ಅನುಷ್ಠಾನಕ್ಕಾಗಿ ಲೋಕಸಭಾ ಚುನಾವಣೆಯ ಯಶಸ್ಸು ನಮ್ಮದಾಗ ಬೇಕು. ನಮ್ಮ ಅಭ್ಯರ್ಥಿ ಜಯಪ್ರಕಾಶ್ ಹಗ್ಡೆ ಇಲ್ಲಿಯೇ ಹುಟ್ಟಿ ಬೆಳದವರು. ಅವರ ಗೆಲುವು ಜನಸಾಮಾನ್ಯರ ಗೆಲುವು ಎಂದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಮಾತನಾಡಿ, ಭಾರತೀಯ ಸ್ಟೇಟ್ ಬ್ಯಾಂಕ್ ಸುಪ್ರಿಂ ಕೋರ್ಟಿನ ಮುಂದಿಟ್ಟಿರುವ ಚುನಾವಣಾ ಬಾಂಡುಗಳ ಒಳಸುಳಿ ಬಿಜೆಪಿಯ ಅಧಿಕಾರ ಸ್ಥಿರೀಕರಣ ದಾಹದ ಕರಾಳ ಮುಖವನ್ನು ಬಯಲು ಮಾಡಿದೆ. ಆ ಮೂಲಕ ಅದು ಒಂದು ಪ್ರಜಾಪ್ಭಭುತ್ವ ರಾಷ್ಟ್ರದಲ್ಲಿ ಅಧಿಕಾರ ನಡೆಸುವ ಮತ್ತು ಚುನಾವಣೆಗೆ ಸ್ಫರ್ದಿಸುವ ನೈತಿಕ ಹಕ್ಕನ್ನು ಕಳಕೊಂಡಿದೆ.  ಕೇಂದ್ರದಲ್ಲಿ ಸ್ವಚ್ಛ ದಿಟ್ಟ ಜನಾಡಳಿತಕ್ಕಾಗಿ ಕಾಂಗ್ರೆಸ್ ಪಕ್ಷದ ಆಡಳಿತ ಅನಿವಾರ್ಯ ಎಂದರು.

ನಿವೃತ್ತ ಪುರಸಭಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸಂದರ್ಭೋಚಿತವಾಗಿ ಮಾತಾಡಿದರು. ಮಾಜಿ ಪುರಸಭಾಧ್ಯಕ್ಷ ಸುಭೀತ್ ಕುಮಾರ್ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ರಹೀಮ್ ಪೊಲ್ಲಾರ್ ಹಿರಿಯ ನಾಯಕ ಗೋಪಾಲ ಭಂಡಾರಿ, ಪುರಸಭಾ ಸದಸ್ಯರು, ಮಾಜಿ ಸದಸ್ಯರು, ವಿವಿಧ ಘಟಕಗಳ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ವಕ್ತಾರ ಫುರಸಭಾ ಸದಸ್ಯ ಶುಭದ ರಾವ್ ಸ್ವಾಗತಿಸಿ ಪ್ರಸ್ಥಾವನೆ ಮಾಡಿ ವಂದನೆ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News