ಕಾಪು: ಮೀಫ್ ವತಿಯಿಂದ ಜಿಲ್ಲಾ ಮಟ್ಟದ 3ನೇ ಮೊಂಟೆಸ್ಸರಿ ಶಿಕ್ಷಕರ ತರಬೇತಿ ಶಿಬಿರ
ಉಡುಪಿ: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವತಿಯಿಂದ ಉತ್ತರ ವಲಯ ಮೊಂಟೆಸ್ಸರಿ(KG) ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವು ಶನಿವಾರ ಕಾಪುವಿನ ಕ್ರೆಸೆಂಟ್ ಅಂತರಾಷ್ಟ್ರೀಯ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕನ್ವೀನರ್ ಅನ್ವರ್ ಹುಸೈನ್ ಗೂಡಿನಬಳಿ ಅವರು ಸ್ವಾಗತಿಸಿದರು. ಕ್ರೆಸೆಂಟ್ ಅಂತರಾಷ್ಟ್ರೀಯ ಶಾಲೆಯ ಅಧ್ಯಕ್ಷ ಶಂಸುದ್ದೀನ್ ಸಾಹೇಬ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಪು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಬ್ದುಲ್ ಖಾದರ್ ಮಾತನಾಡಿ, ಮಕ್ಕಳಿಗೆ ಎಳೆಯ ಪ್ರಾಯದಿಂದಲೇ ಶಿಕ್ಷಣದ ಮಹತ್ವವನ್ನು ತಿಳಿಸಿ ಮುಂದೆ ಉತ್ತಮ ಪ್ರಜೆಗಳಾಗಿ, ದೇಶದ ಉನ್ನತ ನಾಗರಿಕರಾಗಿ ಜೀವಿಸಲು ಸಹಕಾರಿಯಾಗಬೇಕು ಎಂದು ಶಿಕ್ಷಕಿಯರಿಗೆ ಕಿವಿಮಾತು ನೀಡಿದರು.
ಕಾಪು ಕ್ರೆಸೆಂಟ್ ಅಂತರಾಷ್ಟ್ರೀಯ ಶಾಲೆ ಪ್ರಾಯೋಜಿಸಿದ್ದ ಈ ತರಬೇತಿ ಕಾರ್ಯಗಾರದಲ್ಲಿ ಮಂಗಳೂರಿನ ಯೇನಪೋಯ ವಿದ್ಯಾಸಂಸ್ಥೆಯ ಅಕ್ಷರ ಹೌಸ್ ಆಫ್ ಚಿಲ್ಡ್ರನ್ ವಿಭಾಗದ ತರಬೇತುದಾರರು ತರಬೇತಿ ಕೈಗೊಂಡರು. ಕಾಪು, ಉಡುಪಿ, ಕುಂದಾಪುರ, ಕಾರ್ಕಳ, ಮಣಿಪಾಲ ತಾಲೂಕುಗಳ 14 ವಿದ್ಯಾಸಂಸ್ಥೆಗಳ ಒಟ್ಟು 71 ಶಿಕ್ಷಕರು ಭಾಗವಹಿಸಿದ್ದರು.
ಮೀಫ್ ಒಕ್ಕೂಟದ ಅಧ್ಯಕ್ಷ ಮೂಸಬ್ಬ. ಪಿ.ಬ್ಯಾರಿ ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು. ಒಕ್ಕೂಟದ ಉತ್ತರ ವಲಯದ ಅಧ್ಯಕ್ಷ ಶಬಿಹ್ ಅಹ್ಮದ್ ಖಾಝಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಸ್ಯರಾದ ಅಡ್ವೊಕೇಟ್ ಉಮರ್ ಫಾರೂಕ್, ಫರ್ವೇಜ್ ಅಲಿ, ಯೆನೆಪೋಯ ವಿದ್ಯಾ ಸಂಸ್ಥೆಯ ಸಹ ನಿರ್ದೇಶಕ ಆಂಟನಿ ಜೋಸೆಫ್, ಕ್ರೆಸೆಂಟ್ ಶಾಲೆಯ ಆಡಳಿತ ಅಧಿಕಾರಿ ನವಾಬ್ ಹಸನ್ ಪ್ರಾಂಶುಪಾಲ ಅಕ್ಬರ್ ಅಲಿ, ಉಪ ಪ್ರಾಂಶುಪಾಲ ಗುರುದತ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಝರೀನ ಕಾರ್ಯಕ್ರಮ ನಿರೂಪಿಸಿದರು, ಅಸ್ಮ ಖಾಝಿ ವಂದಿಸಿದರು.