ಕಾರ್ಕಳ | ಮನೆಗಳಲ್ಲಿ ಅಕ್ರಮ ಗೋವಾ ಮದ್ಯ ವಶ ಪ್ರಕರಣ: ಓರ್ವ ಆರೋಪಿಯ ಸೆರೆ

Update: 2024-11-17 07:36 GMT

ಕಾರ್ಕಳ, ನ.17: ಬೋಳ ಗ್ರಾಮದ ಮರಿಮಾರು ಮತ್ತು ಅಬ್ಬನಡ್ಕದ ಮನೆಗಳ ಆವರಣದಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಗೋವಾ ಮದ್ಯ ವಶಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಅಬಕಾರಿ ಪೊಲೀಸರು ರವಿವಾರ ಕಾರವಾರ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ.

ಆದಿಉಡುಪಿಯ ಪ್ರಶಾಂತ್ ಸುವರ್ಣ ಬಂಧಿತ ಆರೋಪಿ. ಪ್ರಕರಣದ ಇನ್ನೋರ್ವ ಆರೋಪಿ ಬೋಳ ಗ್ರಾಮದ ಅಬ್ಯನಡ್ಕದ ಅವಿನಾಶ ಮಲ್ಲಿ ಎಂಬಾತನ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.

ಇವರು ಎರಡು ಮನೆಗಳಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾದ 15 ಲಕ್ಷ ರೂ. ಮೌಲ್ಯದ ಒಟ್ಟು 2360.850 ಲೀಟರ್ ವಿವಿಧ ಬ್ರಾಂಡ್ ಗಳ ಗೋವಾ ಮದ್ಯವನ್ನು ಅಬಕಾರಿ ಪೊಲೀಸರು ನ.14ರಂದು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದರು. ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ ಪ್ರಕರಣದ ಆರೋಪಿಗಳು ಪರಾರಿಯಾಗಿ ತಲೆಮರೆಸಿಕೊಂಡಿದ್ದರು.

ತನಿಖೆ ಮುಂದುವರಿಸಿದ ಪೊಲೀಸರು ಪ್ರಶಾಂತ್ ಸುವರ್ಣ ಉಡುಪಿಯಿಂದ ಕಾರವಾರಕ್ಕೆ ತೆರಳುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಅಧಿಕಾರಿಗಳ ತಂಡ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಆರೋಪಿಯನ್ನು ಉಡುಪಿಗೆ ಕರೆ ತಂದು ಕಾರ್ಕಳ ಜೆ.ಎಂ.ಎಫ್.ಸಿ. ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.

ಇನ್ನೋರ್ವ ಆರೋಪಿ ಅವಿನಾಶ ಮಲ್ಲಿಯನ್ನು ಶೀಘ್ರ ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಪಿ. ತಿಳಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News