ಕಾಪು: ಜಮೀಯ್ಯತುಲ್ ಫಲಾಹ್ ನಿಂದ ವಿದ್ಯಾರ್ಥಿ ವೇತನ ವಿತರಣೆ
ಕಾಪು: ಜಮೀಯ್ಯತುಲ್ ಫಲಾಹ್ ಕಾಪು ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ ಶನಿವಾರ ಕಾಪುವಿನ ಕೆ1 ಹೊಟೇಲ್ ನಲ್ಲಿ ನಡೆಯಿತು.
ಕಾಪು ತಾಲೂಕಿನ ಪ್ರತಿಭಾನ್ವಿತ 66 ವಿದ್ಯಾರ್ಥಿಗಳಿಗೆ ಒಟ್ಟು 2.64 ಲಕ್ಷ ರೂ. ಆರೋಗ್ಯ ಸಹಾಯಕ್ಕಾಗಿ 40 ಸಾವಿರ ರೂ. ಸೇರಿ ಸುಮಾರು ಮೂರು ಲಕ್ಷ ರೂ.ಗೂ ಅಧಿಕ ಮೌಲ್ಯವನ್ನು ಅರ್ಹರಿಗೆ ವಿತರಿಸಲಾಯಿತು.
ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಮಾತನಾಡಿ, ಮುಸ್ಲಿಮ್ ಸಮುದಾಯ ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ಜಮೀಯ್ಯತುಲ್ ಫಲಾಹ್ ಇದಕ್ಕಾಗಿ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಮೀಯ್ಯತುಲ್ ಫಲಾಹ್ ಕಾಪು ತಾಲೂಕು ಘಟಕದ ಅಧ್ಯಕ್ಷ ಶಬಿ ಅಹ್ಮದ್ ಕಾಝಿ ಮಾತನಾಡಿ, ಪ್ರತಿಯೋರ್ವರು ಈ ವಿದ್ಯಾರ್ಥಿವೇತನವನ್ನು ದುರುಪಯೋಗ ಮಾಡದೆ ಇದನ್ನು ಮುಂದಿನ ತಮ್ಮ ಶಿಕ್ಷಣಕ್ಕಾಗಿ ಮೀಸಲಿಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಹಲೀಮ ಸಾಬ್ಜು ಆಡಿಟೋರಿಯಂ ಆಡಳಿತ ನಿರ್ದೇಶಕ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಶುಭಹಾರೈಸಿದರು.
ಉಪಾಧ್ಯಕ್ಷ ಮುಹಮ್ಮದ್ ಸಾದಿಕ್, ಕೋಶಾಧಿಕಾರಿ ಶೇಖ್ ಸಾಬಿರ್ ಆಲಿ ಉಪಸ್ಥಿತರಿದ್ದರು.
ಪತ್ರಿಕಾ ಕಾರ್ಯದರ್ಶಿ ಅನ್ವರ್ ಅಲಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿದರು. ಉಸ್ಮಾನ್ ಖಾನ್ ಕಿರಾಅತ್ ಪಠಿಸಿದರು. ಸಾಬೀರ್ ಅಲಿ ವಂದಿಸಿದರು.