ಕೋಲ್ಕತಾ ಪ್ರಕರಣ: ಮಣಿಪಾಲ ವಿದ್ಯಾರ್ಥಿಗಳಿಂದ ಮೌನ ಮೆರವಣಿಗೆ

Update: 2024-08-20 13:21 GMT

ಉಡುಪಿ, ಆ.20: ಕೋಲ್ಕತ್ತಾದ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಮೊಂಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಿದರು.

ಮಣಿಪಾಲ ಕೆಎಂಸಿಯ 1,000ಕ್ಕೂ ಅಧಿಕ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗಳು ಮೊಂಬತ್ತಿ ಮೆರವಣಿಗೆ ಯಲ್ಲಿ ಭಾಗವಹಿಸಿದ್ದರು. ವೈದ್ಯೆ ಮೇಲೆ ನಡೆದ ಅಮಾನುಷ ಅತ್ಯಾಚಾರ ಹಾಗೂ ಭೀಕರ ಕೊಲೆಯಿಂದ ಭಾರತದಲ್ಲಿ ದುಡಿಯುವ ಮಹಿಳೆ ಹಾಗೂ ವೈದ್ಯರ ಸುರಕ್ಷತೆಯ ಕುರಿತಂತೆ ಕಳವಳವನ್ನು ಉಂಟುಮಾಡಿದೆ ಎಂದು ಪ್ರತಿಭಟನಕಾರರು ಹೇಳಿದರು.

ಇಂತಹ ಹಿಂಸಾಚಾರದ ವಿರುದ್ಧ ವೈದ್ಯಕೀಯ ಲೋಕ ಭ್ರಾತೃತ್ವದ ಒಗ್ಗಟ್ಟನ್ನು ಪ್ರದರ್ಶಿಸುವುದು ನಮ್ಮ ಕರ್ತವ್ಯ. ಯಾವುದೇ ರೂಪದ ಹಿಂಸೆಯನ್ನು ನಾವು ಸಹಿಸುವುದಿಲ್ಲ. ಸಂತ್ರಸ್ತೆಗೆ ಸಂಪೂರ್ಣ ನ್ಯಾಯ ದೊರೆಯಬೇಕೆಂಬುದು ನಮ್ಮ ನಿಲುವಾಗಿದೆ ಎಂದು ಅವರು ಹೇಳಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಪದ್ಮರಾಜ ಹೆಗ್ಡೆ, ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಅಸೋಸಿಯೇಟ್ ಡೀನ್‌ಗಳು, ಕೆಎಂಸಿಯ ವೈದ್ಯರು ಪಾಲ್ಗೊಂಡಿದ್ದರು. 




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News