ಕೊಲ್ಲೂರು | ನಾಗೋಡಿ ಘಾಟಿ ಬಳಿ ಚರಂಡಿಗೆ ಉರುಳಿದ ಖಾಸಗಿ ಬಸ್: ಹಲವು ವಿದ್ಯಾರ್ಥಿಗಳಿಗೆ ಗಾಯ

Update: 2024-07-22 08:14 GMT

ಕುಂದಾಪುರ: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ಕೊಲ್ಲೂರು ಸಮೀಪದ ನಾಗೋಡಿ ಘಾಟಿ ಬಳಿ ಸೋಮವಾರ ನಡೆದಿದೆ.

ಶಿವಮೊಗ್ಗದಿಂದ ಕೊಲ್ಲೂರಿನತ್ತ ಬರುತ್ತಿದ್ದ ಬಸ್ ಪ್ರಯಾಣಿಕರಾಗಿದ್ದ ಕೊಲ್ಲೂರು ಪ್ರೌಢಶಾಲೆಯ 7 ಮಕ್ಕಳು ಹಾಗೂ ಕೊಲ್ಲೂರು ಜ್ಯೂನಿಯರ್ ಕಾಲೇಜಿನ 10 ವಿದ್ಯಾರ್ಥಿಗಳ ಸಹಿತ ಪ್ರಯಾಣಿಕರಿಗೆ ಗಾಯಗಳಾಗಿವೆ.

ಗಾಯಾಳು ವಿದ್ಯಾರ್ಥಿಗಳನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರೆಲ್ಲರೂ ಮಲೆನಾಡು ಭಾಗದ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ.

 

ಶಾಲೆಗೆ ನಿರಂತರ ರಜೆಯಿದ್ದ ಹಿನ್ನೆಲೆಯಲ್ಲಿ ಮನೆಗೆ ತೆರಳಿದ್ದ ಅವರು ಸೋಮವಾರ ಮತ್ತೆ ಶಾಲೆಗೆ ವಾಪಸ್ಸಾಗುತ್ತಿದ್ದರು. ಬೆಳಗ್ಗೆ ಮಳೆ ಹೆಚ್ಚಿದ್ದರಿಂದ ಘಾಟಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದ್ದು, ಬಸ್ಸಿನ ಮುಂಭಾಗ ಜಖಂಗೊಂಡಿದೆ.

ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ, ಕೊಲ್ಲೂರು ಪಿಎಸ್ಸೈ ವಿನಯ್ ಎಂ. ಕೊರ್ಲಹಳ್ಳಿ, ಪಿಎಸ್ಸೈ ಸುಧಾರಾಣಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.

ಅಪಘಾತದಿಂದ ಮಕ್ಕಳು ಕಂಗಾಲಾಗಿದ್ದು, ಬೈಂದೂರು ಬಿಇಒ ನಾಗೇಶ್ ನಾಯಕ್ ಹಾಗೂ ಹೆಚ್ಚುವರಿ ಎಸ್ಪಿ ಶಾಲೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News