ಕೆಪಿಎಸ್‌ಸಿ: ಸೆ.14,15ರ ಕನ್ನಡ ಭಾಷೆ, ಸ್ಪರ್ಧಾತ್ಮಕ ಪರೀಕ್ಷೆಗಳ ಮುಂದೂಡಿಕೆ
ಉಡುಪಿ, ಸೆ.13:ಕೆಪಿಎಸ್‌ಸಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸೆ.10ರಂದು ಹೊರಡಿಸಿರುವ ಹೊಸ ಆದೇಶದಂತೆ ಈ ಹಿಂದೆ ಅಧಿಸೂಚಿಸಿರುವ ಎಲ್ಲಾ ಹುದ್ದೆಗಳಿಗೂ ವಯೋಮಿತಿ ಸಡಿಲಿಕೆ ಅನ್ವಯಿಸಿ ಹೊಸದಾಗಿ ಅರ್ಜಿ ಸಲ್ಲಿಸಲು ಅವ ಕಾಶ ನೀಡಬೇಕಾಗಿರುವುದರಿಂದ ಸೆ.14 ಮತ್ತು ಸ.15ರಂದು ನಡೆಯಬೇಕಾಗಿರುವ ಕನ್ನಡ ಭಾಷಾ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ ಮಾರ್ಚ್ 13ರ ಅದಿಸೂಚನೆಯಂತೆ ಮೂಲವೃಂದದಲ್ಲಿರುವ ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ಇದೇ ಸೆ.14 ಮತ್ತು 15ರಂದು ಕ್ರಮವಾಗಿ ಕನ್ನಡ ಭಾಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ನಿರ್ಧರಿಸ ಲಾಗಿತ್ತು. ಹಾಗೂ ಅಭ್ಯರ್ಥಿಗಳನ್ನು ಪರೀಕ್ಷಾ ಉಪಕೇಂದ್ರಗಳಿಗೆ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿತ್ತು.
ಆದರೆ ಸೆ.10ರಂದು ರಾಜ್ಯ ಸರಕಾರದ ನಡಾವಳಿಗಳಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಾಗುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂಎ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆಯನ್ನು ನೀಡಿ ಆದೇಶಿಸಲಾಗಿತ್ತು.
ಸರಕಾರದ ಈ ಆದೇಶದ ಹಿನ್ನೆಲೆಯಲ್ಲಿ ಮಾ.13ರ ಅಧಿಸೂಚನೆಯ ಎಲ್ಲಾ ಹುದ್ದೆಗಳಿಗೂ ವಯೋಮಿತಿ ಸಡಿಲಿಕೆ ಅನ್ವಯಿಸಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕಾಗಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.