ಕುಂದಾಪುರ: ನಾಲ್ಕೇ ತಿಂಗಳಲ್ಲಿ ಕಿತ್ತು ಹೋದ ದಲಿತ ಕಾಲನಿಯ ಕಾಂಕ್ರಿಟ್ ರಸ್ತೆ!
ಕುಂದಾಪುರ, ಆ.13: ಸಮರ್ಪಕ ರಸ್ತೆ ನಿರ್ಮಿಸಿಕೊಡಿ ಎಂದು ಈ ದಲಿತ ಕಾಲನಿ ನಿವಾಸಿಗಳು ಪ್ರತೀ ಗ್ರಾಮ ಸಭೆಯಲ್ಲೂ ಬೇಡಿಕೆ ಇಡುತ್ತಲೇ ಬಂದಿದ್ದು ಇವರ ಬೇಡಿಕೆಗೆ ಸ್ಪಂದಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಈ ಕಾಲನಿ ಸಂಪರ್ಕಕ್ಕಾಗಿ ಅನುದಾನ ಬಿಡುಗಡೆಯಾಗಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿತ್ತು. ಆದರೆ ರಸ್ತೆ ನಿರ್ಮಾಣಗೊಂಡ ನಾಲ್ಕೇ ತಿಂಗಳುಗಳಲ್ಲಿ ಕಾಂಕ್ರಿಟ್ ರಸ್ತೆಯ ಜಲ್ಲಿಕಲ್ಲುಗಳೆಲ್ಲಾ ಮೇಲೆದ್ದು ಹೊಂಡಗಳು ಕಾಣಿಸಿಕೊಂಡಿದೆ.
ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೋವಾಡಿ ಶಾಲಾ ಸಮೀಪದ ದಲಿತ ಕಾಲನಿ ರಸ್ತೆಗೆ ಕಳೆದ ಜನವರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಉಡುಪಿ ನಿರ್ಮೀತಿ ಕೇಂದ್ರದಿಂದ 261 ಮೀಟರ್ ಉದ್ದದ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈ ವರ್ಷ ಮಳೆಗಾಲದ ಆರಂಭದಲ್ಲೇ ರಸ್ತೆಯ ಎರಡು ಕಡೆಗಳಲ್ಲಿ ಜಲ್ಲಿಕಲ್ಲುಗಳು ಮೇಲೆದ್ದು ಬಂದಿದ್ದು, ವಾಹನಗಳು ಸಂಚರಿಸುವಾಗ ಜಲ್ಲಿಗಳು ಟಯರ್ ನಿಂದ ಸಿಡಿಯುವುದರಿಂದ ಪಾದಚಾರಿಗಳಿಗೆ, ಶಾಲಾ ಮಕ್ಕಳಿಗೆ, ವಯೋವೃದ್ಧರಿಗೆ ನಡೆದಾಡಲು ಸಮಸ್ಯೆಗಳಾಗುತ್ತಿದೆ. ಹೊಂಡ ಮಾತ್ರವಲ್ಲದೇ, ಒಂದರೆರಡು ಕಡೆಗಳಲ್ಲಿ ರಸ್ತೆ ಬಿರುಕು ಬಿಟ್ಟಿರುವುದು ಕಂಡುಬಂದಿದೆ.
ರಸ್ತೆ ಕಾಮಗಾರಿಯ ವಿರುದ್ದ ಆರಂಭದಿಂದಲೂ ಇಲ್ಲಿನ ನಿವಾಸಿಗಳು ಧ್ವನಿ ಎತ್ತಿದ್ದು, ಸಂಬಂಧಪಟ್ಟ ಗುತ್ತಿಗೆದಾರರನ್ನು ಪ್ರಶ್ನಿಸಿ ಕಳಪೆ ಕಾಮಗಾರಿ ನಡೆಸದೇ ವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಲು ಆಗ್ರಹಿಸಿದ್ದರು. ಅಲ್ಲದೇ ರಸ್ತೆ ಕಾಮಗಾರಿಗೆ ಸಹಕಾರವನ್ನು ಕೊಟ್ಟಿದ್ದಲ್ಲದೇ ದೈವಸ್ಥಾನದ ನೀರು ಕಾಂಕ್ರಿಟ್ ಗೆ ಕೊಡುವ ಮೂಲಕ ಗುತ್ತಿಗೆದಾರರೊಂದಿಗೆ ಇಲ್ಲಿನ ನಿವಾಸಿಗಳು ಕೈ ಜೋಡಿಸಿದ್ದರು. 261 ಮೀಟರ್ ಉದ್ದದ ರಸ್ತೆಯ ಕಲ್ಲುಕುಟ್ಟಿಗ ದೈವಸ್ಥಾನದ ಎದುರು ಎರಡು ಕಡೆಗಳಲ್ಲಿ ಜಲ್ಲಿ-ಕಲ್ಲುಗಳು ಎದ್ದು ಹೊಂಡಗಳು ಕಾಣಿಸಿಕೊಂಡಿವೆ. ಈ ರಸ್ತೆ ನಿರ್ಮಾಣಕ್ಕೂ ಮೊದಲು ತ್ರಾಸಿ ಗ್ರಾಪಂ ವತಿಯಿಂದ ಎರಡೂ ಕಡೆ ಚರಂಡಿ ನಿರ್ಮಾಣ ಮಾಡಲಾಗಿದೆ.
ರಸ್ತೆ ಮೇಲೆ ನೀರು ನಿಂತುಕೊಳ್ಳದೇ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ ರಸ್ತೆಯಲ್ಲಿ ಗುಂಡಿಗಳು ಏಕಾದವು ಎನ್ನುವುದೇ ಗ್ರಾಮಸ್ಥರ ಯಕ್ಷ ಪ್ರಶ್ನೆಯಾಗಿದೆ
'ರಸ್ತೆ ನಿರ್ಮಾಣದ ಆರಂಭದಿಂದಲೂ ಕಳಪೆ ಕಾಮಗಾರಿಯ ವಿರುದ್ದ ನಾವು ಧ್ವನಿ ಎತ್ತುತ್ತಲೇ ಬಂದಿದ್ದೇವೆ. ಬೇಕಾಬಿಟ್ಟಿಯಾಗಿ ವೆಟ್ಮಿಕ್ಸ್ ಅನ್ನು ಚೆಲ್ಲಿದ್ದಾರೆ. ಕಾಟಾಚಾರಕ್ಕೆ ಕಾಂಕ್ರಿಟ್ ಮಾಡಿ ಹೋಗಿದ್ದಾರೆ. ಕಾಂಕ್ರಿಟ್ ಕಿತ್ತು ಹೋದ ಬಗ್ಗೆ ಸ್ಥಳೀಯಾಡಳಿತದ ಗಮನಕ್ಕೆ ತಂದಿದ್ದೇವೆ. ಆದರೆ ಇದುವರೆಗೂ ನಮಗೆ ಯಾವುದೇ ಸ್ಪಂದನ ಸಿಕ್ಕಿಲ್ಲ. ಉಡುಪಿ ನಿರ್ಮೀತಿ ಕೇಂದ್ರ ಕಳಪೆ ಕಾಮಗಾರಿ ನಡೆಸಿ ದಲಿತರ ಹಣವನ್ನು ದುರುಪಯೋಗ ಮಾಡುವುದು ಸರಿಯಲ್ಲ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಿರ್ಮೀತ ಕೇಂದ್ರ ಹಾಗೂ ಗುತ್ತಿಗೆದಾರರ ವಿರುದ್ದ ಕ್ರಮ ಜರುಗಿಸಬೇಕು’
-ಚಿದಂಬರ, ಸ್ಥಳೀಯ ಗ್ರಾಮಸ್ಥರು
‘ಪ್ರಭಾರ ಯೋಜನಾ ನಿರ್ದೇಶಕನಾಗಿ ಇತ್ತೀಚೆಗಷ್ಟೇ ಅಧಿಕಾರ ವಹಿಸಿ ಕೊಂಡಿದ್ದೇನೆ. ತ್ರಾಸಿ ಗ್ರಾಪಂ ವ್ಯಾಪ್ತಿಯ ಮೋವಾಡಿ ದಲಿತ ಕಾಲನಿಯ ರಸ್ತೆ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಮಾಹಿತಿ ಪಡೆದು ಸಂಬಂಧಪಟ್ಟ ಇಂಜಿನಿಯರ್ ಅನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’
-ದಿವಾಕರ್, ಪ್ರಭಾರ ಯೋಜನಾ ನಿರ್ದೇಶಕರು, ನಿರ್ಮೀತಿ ಕೇಂದ್ರ ಉಡುಪಿ