ಜಿಲ್ಲೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನದ ಕೊರತೆ: ಉಡುಪಿ ಜಿಲ್ಲಾಧಿಕಾರಿ

Update: 2023-09-16 15:17 GMT

ಉಡುಪಿ, ಸೆ.16:ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಮಟ್ಟಿಗೆ ಮಲ್ಪೆ ಬೀಚ್ ಉತ್ತಮವಾಗಿ ಅಭಿವೃದ್ಧಿ ಹೊಂದಿದ್ದು, ಇದರಿಂದ ಹೆಚ್ಚಿನ ಆದಾಯ ಬರುತ್ತಿದೆ. ಸರಕಾರದಿಂದ ಜಿಲ್ಲೆಗೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನದ ಕೊರತೆ ಇದ್ದು, ಇಲ್ಲಿನ ವಾರ್ಷಿಕ ಆದಾಯದ ಶೇ.50ರಷ್ಟನ್ನು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ನೀಡಲು ತೀರ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರ್ ಹೇಳಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರವಾಸೋದ್ಯಮ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಬೈಂದೂರು ತಾಲೂಕಿನ ಪಡುವರಿ ಸೋಮೇಶ್ವರ ಬೀಚ್ ಅಭಿವೃದ್ಧಿಗೆ ಖಾಸಗಿ ಜಮೀನನ್ನು ಖರೀದಿಸಲು ಅವರೊಂದಿಗೆ ಮಾತುಕತೆ ನಡೆಸಿ ಖರೀದಿಗೆ ಮುಂದಾಗಬೇಕೆಂದು ಜಿಲ್ಲಾಧಿಕಾರಿಗಳು ಕುಂದಾಪುರದ ಉಪ ವಿಭಾಗಾಧಿಕಾರಿಗೆ ಸೂಚನೆ ನೀಡಿದರು.

ಕಡಲ ತೀರದ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಕಾಮಗಾರಿಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸಮುದ್ರ ತೀರದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯ 92 ಕಿ.ಮೀ. ಉದ್ದದ ಕಡಲ ತೀರದಲ್ಲಿ ಅನೇಕ ಬೀಚ್‌ಗಳಿದ್ದು, ಇವುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ನೀಲಿ ನಕಾಶೆಯನ್ನು ತಯಾರಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡ ಬೇಕು ಎಂದರು.

ಬೀಚ್‌ಗಳಲ್ಲಿ ಸಹ ಸರ್ವೆ ಕಾರ್ಯಗಳನ್ನು ಕೈಗೊಳ್ಳುವುದರೊಂದಿಗೆ ಸಮುದ್ರದ ತೀರದ ಜಾಗಗಳನ್ನು ಗುರುತಿಸುವ ಕಾರ್ಯ ಮಾಡಬೇಕು. ಇದರಿಂದ ಅತಿಕ್ರಮಣ ಆಗುವುದನ್ನು ತಪ್ಪಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.

ಸಿಆರ್‌ಝೆಡ್ ನಿಯಮಗಳಲ್ಲಿ ಅನೇಕ ಬದಲಾವಣೆಗಳು ಆಗಿದ್ದು, ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಭಾಗಿದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅನೇಕ ಆಸಕ್ತರು ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಲು ಮುಂದೆ ಬಂದಿದ್ದಾರೆ. ಅವರಿಗೆ ಬೇಕಾದ ಮಾಹಿತಿ ನೀಡಬೇಕೆಂದು ತಿಳಿಸಿದರು.

ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಬೆಳಕು ಚೆಲ್ಲುವ ವಿಡಿಯೋ ತುಣುಕುಗಳನ್ನು ಬೆಂಗಳೂರು ಹಾಗೂ ಮಂಗಳೂರಿನ ವಿಮಾನ ನಿಲ್ದಾಣ ಗಳಲ್ಲಿ ಪ್ರದರ್ಶಿಸಿ ಪ್ರವಾಸಿಗರನ್ನು ಆಕರ್ಷಿಸಲು ಮುಂದಾಗುವುದರ ಜೊತೆಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಫಲಕಗಳನ್ನು ಸಹ ಅಲ್ಲಲ್ಲಿ ಅಳವಡಿಸಬೇಕು ಎಂದು ಸಲಹೆ ನೀಡಿದರು.

ಮಲ್ಪೆ ಬೀಚ್, ಅಸರೆ ಬೀಚ್, ಕೋಡಿ, ಕುಂದಾಪುರ ಬೀಚ್‌ಗಳಲ್ಲಿ ನೂತನ ಮಾದರಿಯ ಶೌಚಾಲಯಗಳನ್ನು ನಿರ್ಮಿಸಿ ನಿರ್ವಹಿಸಲು ಅನುಮತಿ ನೀಡುವಂತೆ ಬೆಂಗಳೂರಿನ ಕೆಲವು ಚಾರಿಟೇಬಲ್ ಟ್ರಸ್ಟ್‌ಗಳು ಮುಂದೆ ಬಂದಿವೆ. ಅವುಗಳಿಗೆ ಪರಿಶೀಲಿಸಿ ಅವಕಾಶ ಕಲ್ಪಿಸಲಾಗುವುದು ಎಂದರು.

ಪಡುಬಿದ್ರಿಯ ಬ್ಲೂ ಫ್ಲಾಗ್ ಬೀಚಿನಲ್ಲಿ ಪ್ರವಾಸಿಗರಿಗೆ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಕಲ್ಪಿಸಲು ಕೈಗೊಂಡಿರುವ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದ ಅವರು, ನೀರಿನ ಸೌಲಭ್ಯಗಳ ಕೊರತೆಯಿದ್ದಲ್ಲಿ ಸ್ಥಳೀಯ ಪಂಚಾಯತಿ ಜಾಗದಲ್ಲಿ ಬೋರ್‌ವೆಲ್ ಕೊರೆಸಿ ನೀರಿನ ವ್ಯವಸ್ಥೆ ಮಾಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಎಸ್., ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ನಗರಸಭೆ ಆಯುಕ್ತ ರಾಯಪ್ಪ, ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂನ ಜಿಲ್ಲಾ ಅಧ್ಯಕ್ಷ ಮನೋಹರ್ ಶೆಟ್ಟಿ, ಟೂರ್ಸ್‌ ಅಂಡ್ ಟ್ರಾವೆಲ್ಸ್ ಅಸೋಸಿಯೇಷನ್‌ನ ಜಿಲ್ಲಾ ಅಧ್ಯಕ್ಷ ನಾಗರಾಜ್ ಹೆಬ್ಬಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News