ಮಣಿಪಾಲ: 4 ಮಂದಿ ಗಾಂಜಾ ಪೆಡ್ಲರ್‌ಗಳ ಬಂಧನ; ಕಾರು, ಮೊಬೈಲ್ ವಶಕ್ಕೆ
ಮಣಿಪಾಲ, ನ.26: ಗಾಂಜಾ ಮಾರಾಟಕ್ಕೆ ಸಂಬಂಧಿಸಿ ನಾಲ್ವರು ಗಾಂಜಾ ಪೆಡ್ಲರ್‌ಗಳನ್ನು ಮಣಿಪಾಲ ಪೊಲೀಸರು ಮಣಿಪಾಲ ಶ್ರೀಂಬ್ರಾ ಸೇತುವೆ ಬಳಿ ನ.26ರಂದು ಅಪರಾಹ್ನ ವೇಳೆ ಬಂಧಿಸಿದ್ದಾರೆ.
ಸಾಸ್ತಾನದ ಅಬ್ದುಲ್ ಲತೀಫ್(32), ಅಶ್ಫಾಕ್(21), ಕೋಟೇಶ್ವರದ ಮುಸ್ತಾಫ್ ಹಂಜಾ ಬ್ಯಾಲಿ(35), ಉಪ್ಪೂರಿನ ಶಕಿಲೇಶ(25) ಬಂಧಿತ ಆರೋಪಿಗಳು. ಇವರಿಂದ ಸುಮಾರು 274 ಗ್ರಾಂ ಗಾಂಜಾ, 5 ಲಕ್ಷ ರೂ. ಮೌಲ್ಯದ ಕಾರು, 19130 ರೂ. ನಗದು, 20 ಸಾವಿರ ರೂ. ಮೌಲ್ಯದ 5 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಮಣಿಪಾಲ ಎಸ್ಸೈ ರಾಘವೆಂದ್ರ ಸಿ. ನೇತೃತ್ವದ ತಂಡ, ನಾಲ್ಕು ಮಂದಿಯನ್ನು ವಶಕ್ಕೆ ಪಡೆದುಕೊಂಡಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾದಕ ವಸ್ತುಗಳನ್ನು ಮಣಿಪಾಲದಲ್ಲಿ ಮಾರಾಟ ಮಾಡುವ ಜಾಲದ ಬಗ್ಗೆ ತನಿಖೆ ಮುಂದುವರಿಸಲಾಗಿದೆ.
ಇವರು ಮಣಿಪಾಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿ ರುವುದು ಗಮನಕ್ಕೆ ಬಂದಿದ್ದು, ಹಲವಾರು ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿರುವುದು ಹಾಗೂ ಸೇವನೆ ಮಾಡಿರುವುದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಅಧಿಕಾರಿಯಾಗಿರುವ ತಾಲೂಕು ದಂಡಾಧಿಕಾರಿ ಟಿ.ಗುರುರಾಜ್, ಮಣಿಪಾಲ ಠಾಣಾ ಎಎಸ್ಸೈ ವಿವೇಕಾನಂದ, ಸಿಬ್ಬಂದಿ ಅಬ್ದುಲ್ ರಝಾಕ್, ಸುಕುಮಾರ ಶೆಟ್ಟಿ, ಪ್ರಸನ್ನ, ಅರುಣ ಕುಮಾರ್, ಚನ್ನೇಶ್, ಮಂಜುನಾಥ ಪಾಲ್ಗೊಂಡಿದ್ದರು.