ತಕ್ಷಣ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಲು ಶಾಸಕರ ಆಗ್ರಹ

Update: 2024-09-02 14:01 GMT

ಯಶ್‌ಪಾಲ್ ಸುವರ್ಣ

ಉಡುಪಿ, ಸೆ.2: ಉಡುಪಿ ಜಿಲ್ಲೆಯಲ್ಲಿ ಕಳೆದ 15 ತಿಂಗಳಿಂದ ಕೇವಲ ಒಂದೇ ಒಂದು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆದಿದ್ದು, ಜಿಲ್ಲೆಯಲ್ಲಿ ಉಂಟಾದ ಮಳೆಹನಿ ಸಹಿತ ವಿವಿಧ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ರೂಪಿಸುವ ನಿಟ್ಟಿನಲ್ಲಿ ತಕ್ಷಣ ಸಭೆಯನ್ನು ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ ಮಾಡಿದ್ದಾರೆ.

2023 ನವೆಂಬರ್ ತಿಂಗಳಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು, ಸಭೆಯ ನಿರ್ಣಯಗಳು ಇಂದಿಗೂ ಅನುಷ್ಠಾನಗೊಂಡಿಲ್ಲ. ಉಡುಪಿ ಜಿಲ್ಲೆಯಲ್ಲಿ ಈ ಬಾರಿ ವ್ಯಾಪಕ ಗಾಳಿ ಮಳೆಯಿಂದ ಸುಮಾರು 235 ಕೋಟಿ ನಷ್ಟವಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಈಗಾಗಲೇ ಸರಕಾರಕ್ಕೆ ವರದಿ ಸಲ್ಲಿಸಿದ್ದರೂ, ರಾಜ್ಯ ಸರಕಾರ ಕಿಂಚಿತ್ ಅನುದಾನವನ್ನು ಮಂಜೂರು ಮಾಡಿಲ್ಲ. ನೂರಾರು ಮಂದಿ ಮನೆ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದರೂ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದಂತಿಲ್ಲ.

ಜಿಲ್ಲೆಯಲ್ಲಿ ಕಡಲ್ಕೊರೆತ, ರಸ್ತೆ, ಕಾಲು ಸೇತುವೆ, ರೇಶನ್ ಕಾರ್ಡ್, ಜಿಲ್ಲಾಸ್ಪತ್ರೆ, ಸರಕಾರಿ ಬಸ್ ಸೌಲಭ್ಯ, ಅಗ್ನಿಶಾಮಕ ದಳ ಸಹಿತ ವಿವಿಧ ಇಲಾಖೆಯ ಸಮಸ್ಯೆಗಳ ಬಗ್ಗೆ ದಿನನಿತ್ಯ ದಿನಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದರೂ ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಜಿಲ್ಲೆಯ ಶಾಸಕರಿಗೆ ಈ ಬಗ್ಗೆ ಚರ್ಚಿಸಿ ಸರಕಾರದ ಗಮನ ಸೆಳೆಯಲು ಅವಕಾಶ ನೀಡದೆ ಉಡುಪಿ ಜಿಲ್ಲೆಯನ್ನು ರಾಜ್ಯ ಸರಕಾರ ಸಂಪೂರ್ಣ ಕಡೆಗಣಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಉಡುಪಿ ಪರ್ಯಾಯ ಮಹೋತ್ಸವ ಸಂದರ್ಭದಲ್ಲಿ ಘೋಷಣೆ ಮಾಡಿದ 10 ಕೋಟಿ ಹಾಗೂ ಕಡಲ್ಕೊರೆತ ತಡೆಗೆ 5 ಕೋಟಿ ಅನುದಾನ ಇನ್ನೂ ಮರೀಚಿಕೆಯಾಗಿದ್ದು, ಜಿಲ್ಲೆಯ ಜನರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತಕ್ಷಣ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News