ಆಧುನೀಕತೆ ಜೀವನ ಶೈಲಿ ಮಾನವನ ಅನಾರೋಗ್ಯಕ್ಕೆ ಮೂಲ: ಡಾ.ರಫೀಕ್

Update: 2024-08-12 11:58 GMT

ಕುಂದಾಪುರ, ಆ.12: ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಸೇವನೆ ಹಾಗೂ ಆಧುನೀಕತೆಯ ಜೀವನ ಶೈಲಿಗಳು ಮಾನವನ ಅನಾರೋಗ್ಯಕ್ಕೆ ಮೂಲ ಕಾರಣವಾಗುತ್ತಿದೆ ಎನ್ನುವುದು ಸಂಶೋಧನೆಗಳಿಂದ ದೃಢಪಡುತ್ತಿದೆ ಎಂದು ಉಡುಪಿ ಹೂಡೆಯ ಬೀಚ್ ಹೀಲಿಂಗ್ ಹೋಂ ನಿರ್ದೇಶಕ ಡಾ.ಮುಹಮ್ಮದ್ ರಫೀಕ್ ಹೇಳಿದ್ದಾರೆ.

ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ರವಿವಾರ ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ನಡೆದ ಸಾಂಪ್ರದಾಯಿಕ ಸಸ್ಯ ಪದಾರ್ಥಗಳ ಪರಿಚಯ ’ಸಸ್ಯಾಮೃತ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ವಿಷಯುಕ್ತ ಪದಾರ್ಥಗಳ ಸೇವನೆಯಿಂದಾಗಿ ಮನುಷ್ಯನ ದೇಹ ವಿಷದ ಮುದ್ದೆಯಾಗುತ್ತಿದೆ. ಬೇಕರಿ ತಿನಿಸುಗಳ ಆಕರ್ಷಣೆ ಮತ್ತು ರುಚಿಗೆ ಒಳಗಾಗುವ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿದೆ. ಪೌಷ್ಠಿಕಾಂಶವುಳ್ಳ ಆಹಾರದ ಸ್ಥಾನಗಳನ್ನು ಎಣ್ಣೆ ಹಾಗೂ ರಾಸಾಯನಿಕ ಮಿಶ್ರಿತ ತಿನಿಸುಗಳು ತುಂಬುತ್ತಿವೆ ಎಂದರು.

ತರಕಾರಿ, ಹಣ್ಣುಗಳು ಕೂಡ ರಾಸಾಯನಿಕ ಪ್ರಭಾವ ಮುಕ್ತವಾಗಿಲ್ಲ. ಒಂದು ವರದಿಯ ಪ್ರಕಾರ 70 ಮಂದಿಯಲ್ಲಿ ಒಬ್ಬರಿಗೆ ಕ್ಯಾನ್ಸರ್ ಖಾಯಿಲೆ ಬರುತ್ತಿದೆ ಎನ್ನಲಾಗುತ್ತಿದೆ. ಮಣಿಪಾಲದ ದೊಡ್ಡ ಆಸ್ಪತ್ರೆಗಳಲ್ಲೂ ಕ್ಯಾನ್ಸರ್ ರೋಗಿಗಳಿಗೆ ಹಾಸಿಗೆ ಇಲ್ಲದ ಪರಿಸ್ಥಿತಿಗಳಿವೆ. ಕ್ಯಾನ್ಸರ್ ಚಿಕಿತ್ಸೆಯ ಬಗ್ಗೆ ಸಂಶೋಧನೆ ಹಾಗೂ ಪರಿಹಾರದ ತುರ್ತು ಅಗತ್ಯವಿದೆ ಎಂದು ಅವರು ತಿಳಿಸಿದರು.

ಕಾರ್ಪೊರೇಟ್ ವ್ಯವಹಾರಿಕ ಜಗತ್ತಿನಲ್ಲಿ ಸಾಗುತ್ತಿರುವ ನಮ್ಮಲ್ಲಿ ಸೇವೆ ಎಂಬ ಪದ ದೂರವಾಗುತ್ತಿದೆ. ಇದಕ್ಕೆ ಆರೋಗ್ಯ ಕ್ಷೇತ್ರವೂ ಹೊರತಾಗಿಲ್ಲ. ಚಿಕಿತ್ಸೆಗಳು ವ್ಯವಹಾರಿಕವಾಗುತ್ತಿರುವ ಈ ಕಾಲಘಟ್ಟದಲ್ಲಿ ರೋಗಿಯಾಗುವ ಮೊದಲೇ ಎಚ್ಚೆತ್ತುಕೊಳ್ಳುವ ಅಗತ್ಯ ಇದೆ. ವಿದ್ಯಾರ್ಥಿ ಹಂತದಲ್ಲೇ ಆಹಾರ ಹಾಗೂ ಆರೋಗ್ಯದ ಬಗ್ಗೆ ಜಾಗೃತಿಯ ಅರಿವು ಮೂಡುವು ದರಿಂದ ಮಾತ್ರ ಅಪಾಯ ಗಳನ್ನು ತಡೆಗಟ್ಟಲು ಸಾಧ್ಯ. ಬಣ್ಣ ಹಾಗೂ ರುಚಿಗಳ ವ್ಯಾಮೋಹದಿಂದ ಹಣವನ್ನು ಕೊಟ್ಟು ಖಾಯಿಲೆಯನ್ನು ಪಡೆದುಕೊಳ್ಳುವ ದುಸ್ಥಿತಿ ನಮ್ಮದಾಗಿದೆ ಎಂದರು.

ಆಲೂರು ಚಿತ್ರಕೂಟ ಆಯುರ್ವೇದ ಆಸ್ಪತ್ರೆಯ ಡಾ.ನೀಲಾ ಎಸ್. ಮಾತನಾಡಿ, ಶುದ್ದವಾದ ಪರಿಸರದಲ್ಲಿ ಪೌಷ್ಠಿಕ ಆಹಾರ ಗಳನ್ನು ಸೇವನೆ ಮಾಡುವುದರಿಂದ ಆರೋಗ್ಯವರ್ದನೆ ಸಹಜವಾಗಿರುತ್ತದೆ. ಬಿಸಿಯಾದ ಹಾಗೂ ದ್ರವಯುಕ್ತ ಆಹಾರ ಸೇವನೆ ಒಳ್ಳೆಯದು. ರಾತ್ರಿ ಬೇಗನೆ ನಿದ್ರಿಸುವ ಹಾಗೂ ಬ್ರಾಹ್ಮಿ ಮುಹೂರ್ತದಲ್ಲಿ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳ ಬೇಕು. ಆರೋಗ್ಯ ಹಾಗೂ ಅನುಕರಣೀಯ ಆಹಾರ ಪದ್ದತಿಗೆ ವಿರುದ್ದವಾದ ಆಹಾರಗಳನ್ನು ವರ್ಜಿಸಬೇಕು. ಮಕ್ಕಳ ಸಹಜವಾದ ಚಟುವಟಿಕೆಗಳು ಆರೋಗ್ಯ ಹಾಗೂ ಬೆಳವಣಿಗೆಯ ಮೇಲೆ ಉತ್ತಮ ಪರಿಣಾಮಗಳನ್ನು ನೀಡುವುದರಿಂದ ಮಕ್ಕಳ ಚಟುವಟಿಕೆಗಳನ್ನು ನಿರ್ಬಂಧಿಸಬಾರದು ಎಂದರು.

ಅಧ್ಯಕ್ಷತೆಯನ್ನು ಬಾಂಡ್ಯಾ ಎಜ್ಯುಕೇಶನಲ್ ಟ್ರಸ್ಟ್‌ನ ಸಂಸ್ಥಾಪಕ ಬಸ್ರೂರು ಅಪ್ಪಣ್ಣ ಹೆಗ್ಡೆ ವಹಿಸಿದ್ದರು. ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕ ಆಡಳಿತ ಟ್ರಸ್ಟಿಗಳಾದ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯಾ ಹಾಗೂ ಅನುಪಮಾ ಎಸ್ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕಿ ವಿಶಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

‘ಅಪಥ್ಯವಾದ ಆಹಾರ, ಮಾನಸಿಕ ಒತ್ತಡ, ಅಶುಚಿತ್ವ, ನಿಯಮಿತವಿಲ್ಲದ ಅಭ್ಯಾಸ, ಪ್ರಕೃತಿ ಮೇಲಿನ ದಾಳಿ, ಮಾಲಿನ್ಯ ಗಳು, ಅಸಹಜ ಜೀವನ ಶೈಲಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ತರಕಾರಿ, ಬೇಳೆ-ಕಾಳುಗಳು ಹಾಗೂ ಸರಳವಾದ ಜೀವನ ಶೈಲಿಗಳೇ ಒಳ್ಳೆಯ ಆರೋಗ್ಯದ ಸೂತ್ರಗಳಾಗಿದೆ. ಕೋಪ, ಅಸೂಯೆಯಿಂದ ಕೆಟ್ಟ ನಡವಳಿಕೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಕೂಡ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ ’

-ಡಾ.ಮುಹಮ್ಮದ್ ರಫೀಕ್, ವೈದ್ಯರು

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News