ಕಾರ್ಕಳ: ವಿಶ್ವ ಅಯೋಡಿನ್ ಕೊರತೆ ತಡೆಗಟ್ಟುವ ದಿನ

Update: 2024-11-04 16:13 GMT

ಉಡುಪಿ:ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಕಾರ್ಕಳ ಪ್ರಥಮ ದರ್ಜೆ ಕಾಲೇಜಿನ ಮಂಜುನಾಥ ಪೈ ಸ್ಮಾರಕದಲ್ಲಿ ನಡೆದ ವಿಶ್ವ ಅಯೋಡಿನ್ ಕೊರತೆ ತಡೆಗಟ್ಟುವ ದಿನ ಕುರಿತ ಮಾಹಿತಿ ಕಾರ್ಯಕ್ರಮವನ್ನು ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ.ಸಂದೀಪ್ ಕುಡ್ವ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಅಯೋಡಿನ್ ನಮ್ಮ ದೇಹಕ್ಕೆ ಬೇಕಾದ ಒಂದು ಸೂಕ್ಷ್ಮ ಪೋಷಕಾಂಶ. ಕತ್ತಿನ ಮುಂಭಾಗದಲ್ಲಿರುವ ಥೈರಾಯ್ಡ್ ಗ್ರಂಥಿಯಿಂದ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿಗೆ ಅಯೋಡಿನ್ ಅಂಶ ಬಹಳ ಮುಖ್ಯ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ. ಶಮಾ ಶುಕುರ್, ಆಹಾರದಲ್ಲಿ ಅಯೋಡಿನ್ ಅಂಶ ಕಡಿಮೆ ಆದಲ್ಲಿ ಮಕ್ಕಳಲ್ಲಿ ಬುದ್ದಿಮಟ್ಟ ಕಡಿಮೆ, ಕಲಿಕೆಯಲ್ಲಿ ಹಿಂದುಳಿಕೆ ಹಾಗೂ ಮಾನಸಿಕ ವಿಕಲತೆ, ಕಿವುಡುತನ, ಕುಬ್ಜತನ, ಬೇಗ ಸುಸ್ತಾಗುವುದು ಮತ್ತು ಗಳಗಂಡರೋಗ ಕಾಣಿಸಿಕೊಳ್ಳಬಹುದು. ಗರ್ಭಿಣಿಯರಲ್ಲಿ ಅಯೋಡಿನ್ ಮಟ್ಟ ಕಡಿಮೆ ಆದರೆ ಗರ್ಭಪಾತ, ಸಂತಾನೋತ್ಪತ್ತಿಯಲ್ಲಿ ತೊಂದರೆ, ಶಿಶುವಿನ ಮೆದುಳಿನ ಮೇಲೆ ಸರಿಪಡಿಸಲಾಗದಂತಹ ತೊಂದರೆ ಉಂಟಾಗಬಹುದು. ಈ ಕುರಿತು ಜಾಗೃತಿ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರ ಪ್ರಾಂಶುಪಾಲೆ ಡಾ. ಚಂದ್ರಾವತಿ, ಮಕ್ಕಳಿಗೆ ಅಯೋಡಿನ್ ಮುಂತಾದ ಸೂಕ್ಷ್ಮ ಪೋಷಕಾಂಶಗಳು ಅಗತ್ಯವಾಗಿ ಬೇಕಾಗಿದ್ದು, ಅವರ ಸರ್ವತೋಮುಖ ಅಭಿವೃದ್ಧಿಗೆ ಇದು ಪೂರಕವಾಗಿರುತ್ತದೆ ಎಂದರು.ಈ ಸಂದರ್ಭದಲ್ಲಿ ಅಯೋಡಿನ್ ಮಾಹಿತಿಯ ಕರಪತ್ರಗಳನ್ನು ಬಿಡುಗಡೆ ಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಸಂತ್ ಶೆಟ್ಟಿ ಎಮ್, ಎನ್ನೆಸ್ಸೆಸ್ ಅಧಿಕಾರಿ ಸೌಮ್ಯ, ತಾಲೂಕು ಆರೋಗ್ಯ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಪ್ರಸನ್ನ ಸ್ವಾಗತಿಸಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಕಾರ್ಯಕ್ರಮ ನಿರೂಪಿಸಿದರು. ಸೂರಜ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News