ಕಲ್ಯಾಣಪುರ: ಮಿಲಾಗ್ರಿಸ್ ಕಾಲೇಜಿನಲ್ಲಿ ದೀಪಾವಳಿ ಆಚರಣೆ
ಕಲ್ಯಾಣಪುರ: ಇಲ್ಲಿನ ಮಿಲಾಗ್ರಿಸ್ ಪದವಿ ಕಾಲೇಜಿನಲ್ಲಿ ದೀಪಾವಳಿ ಹಬ್ಬದ ಆಚರಣೆಯ ಪ್ರಯುಕ್ತ ‘ದೀಪೋತ್ಸವ- 2024’ನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮತ್ತು ಐಕ್ಯೂಎಸಿಗಳ ಸಹಯೋಗದೊಂದಿಗೆ ಆಚರಿಸಲಾದ ಈ ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ಚರ್ಚ್‌ನ ಸಹಾಯಕ ಧರ್ಮಗುರುಗಳಾದ ವಂ. ಪ್ರದೀಪ ಕರ್ಡೋಝಾ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ, ದೀಪಾವಳಿ ಹಬ್ಬದ ಆಚರಣೆಗಳ ಮಹತ್ವವನ್ನು ತಿಳಿಸಿದರು. ಅಜ್ಞಾನದಿಂದ ಸುಜ್ಞಾನದೆಡೆಗೆ ಈ ಬೆಳಕಿನ ಹಬ್ಬವು ನಮ್ಮನ್ನು ಕೊಂಡೊಯ್ಯಲಿ ಎಂದವರು ಹಾರೈಸಿದರು.
ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಸುಬ್ರಹ್ಮಣ್ಯ ಜೋಷಿ ಅವರು ಮಾತನಾಡಿ, ಮಾನವೀಯವಾದ ಮೌಲ್ಯಗಳಿಗೆ ವಿಶ್ವದಾದ್ಯಂತ ಮಹತ್ವವನ್ನು ನೀಡುವ ಅಗತ್ಯದ ಕುರಿತು ವಿವರಿಸಿದರು. ಕ್ರೌರ್ಯಗಳು ಹೆಚ್ಚಾಗಿ ಕಂಡು ಬರುತ್ತಿರುವ ಸಮಾಜದಲ್ಲಿ ದೀಪಾವಳಿಯಂತಹ ಆಚರಣೆಗಳು ಬಾಂಧವ್ಯ ವನ್ನು ಬೆಸೆಯುವಲ್ಲಿ ಪ್ರಮುಖವಾಗುತ್ತವೆ ಎಂದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಸಫ್ವಾನ್ ಅಖ್ತರ್ ದೀಪಾವಳಿ ಶುಭಾಶಯ ಗಳನ್ನು ಕೋರುವುದರೊಂದಿಗೆ ಇಂಪಾದ ಹಾಡನ್ನೂ ಹಾಡಿ ರಂಜಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ ಮಾತನಾಡಿ ಕಾಲೇಜು ಗಳಲ್ಲಿ ಹಬ್ಬಗಳ ಆಚರಣೆಗಳ ಮಹತ್ವದ ಕುರಿತು ತಿಳಿಸಿದರು. ಹಲವು ರೀತಿಯ ಸಂಪ್ರದಾಯಗಳ ವಿದ್ಯಾರ್ಥಿಗಳ ನಡುವೆ ಬಾಂಧವ್ಯಗಳು ವೃದ್ಧಿ ಗೊಳ್ಳುವ ಸೇತುವಾಗಿ ಇಂತಹ ಆಚರಣೆಗಳು ಅರ್ಥಪೂರ್ಣವಾಗಿರುತ್ತವೆ ಎಂದರು.
ಈ ಸಂದರ್ಭ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ವಿವಿಧ ಬಗೆಯ ಮನೋಬೌದ್ಧಿಕ ಆಟಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಬಳಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ನಿರ್ದೇಶಕ ಡಾ. ಹರಿಣಾಕ್ಷಿ ಎಂ.ಡಿ. ಮತ್ತು ಸುಷ್ಮಾ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮೆಲಿಷಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.