ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವೆ: ದಿನಕರ ಹೇರೂರು
ಉಡುಪಿ, ನ.4: ಪ್ರಾಧಿಕಾರಕ್ಕೆ ನೇಮಕಗೊಂಡಿರುವ ಎಲ್ಲಾ ಸದಸ್ಯರು, ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ನಾಯಕರ ಸಹಕಾರ ಪಡೆದುಕೊಂಡು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಉತ್ತಮ ಕಾರ್ಯಕ್ಕೆ ಬದ್ಧರಾಗಿದ್ದೇನೆ. ಇದಕ್ಕಾಗಿ ಎಲ್ಲರ ಸಹ ಕಾರವನ್ನು ಕೋರುತ್ತೇವೆ ಎಂದು ಇಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನಕರ ಹೇರೂರು ತಿಳಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತಳಮಟ್ಟದ ಕಾರ್ಯಕರ್ತನನ್ನು ಗುರುತಿಸಿ ಅವಕಾಶ ನೀಡಿದೆ. ಈ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪ್ರಾಧಿಕಾರದಲ್ಲಿ ಕಡತಗಳು ಭಾರೀ ಸಂಖ್ಯೆಯಲ್ಲಿ ಬಾಕಿ ಇರುವ ಬಗ್ಗೆ ನನಗೆ ಗೊತ್ತಿದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ದೂರುಗಳು ಸಹ ಕೇಳಿ ಬಂದಿರು ವುದು ನನಗೂ ತಿಳಿದಿದೆ. ಅಧಿಕಾರ ವಹಿಸಿಕೊಂಡ ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಸದಸ್ಯರು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಪ್ರಾಧಿಕಾರದ ನೀತಿನಿಯಮ ಗಳನ್ನು, ಗೈಡ್‌ಲೈನ್ ಗಳನ್ನು ಪರಿಶೀಲಿಸಿ ಸರಕಾರದ ಮಟ್ಟದಲ್ಲಿ ಇವುಗಳ ವಿಲೇವಾರಿಗೆ ಪ್ರಯತ್ನಿಸುತ್ತೇನೆ ಎಂದರು.
ಪ್ರಾಧಿಕಾರದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ನಮ್ಮ ನಾಯಕ ರೊಂದಿಗೆ ಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಆಗತ್ಯವಾಗಿ ಆಗಬೇಕಾದ ವ್ಯವಸ್ಥೆಗೆ ಆಗ್ರಹಿಸುತ್ತೇವೆ. ಇಲ್ಲಿನ ಸಮಸ್ಯೆಗಳು, ಕಾನೂನು ತೊಡಕುಗಳನ್ನು ಬಗೆಹರಿಸಿ ಕಡತಗಳ ವಿಲೇವಾರಿಗೆ ಮುತುವರ್ಜಿ ವಹಿಸುವುದಾಗಿ ದಿನಕರ ಹೇರೂರು ತಿಳಿಸಿದರು.
ಈವರೆಗೆ ಗ್ರಾಮಪಂಚಾಯತ್ ವಶದಲ್ಲಿದ್ದ 9-11 ನೀಡುವ ಅಧಿಕಾರ ವನ್ನು ಪ್ರಾಧಿಕಾರಕ್ಕೆ ನೀಡಿರುವುದರಿಂದ ಪ್ರಾಧಿ ಕಾರದ ಮೇಲೆ ಒತ್ತಡ ಬೀಳುತ್ತದೆ ಎಂಬುದನ್ನು ಒಪ್ಪಿಕೊಂಡ ದಿನಕರ, ಅದನ್ನು ಯಾವ ರೀತಿಯಲ್ಲಿ ನಿಭಾಯಿಸು ವುದು ಎಂಬ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸು ವುದಾಗಿ ಹೇಳಿದರು.
ಪ್ರಾಧಿಕಾರದಲ್ಲಿ ದಳ್ಳಾಳಿಗಳ ಹಾವಳಿಯ ಕುರಿತಂತೆ ತುಂಬಾ ದೂರುಗಳು ಕೇಳಿಬರುತಿದ್ದು, ಅದನ್ನು ಯಾವ ರೀತಿ ನಿಭಾಯಿಸುತ್ತೀರಿ ಎಂದು ಪ್ರಶ್ನಿಸಿದ, ಇದು ನನಗೂ ಗೊತ್ತಿದೆ. ವ್ಯವಸ್ಥೆಗಳನ್ನು ಸರಿಪಡಿಸಲು ಖಂಡಿತ ಪ್ರಯತ್ನ ಪಡುತ್ತೇನೆ ಎಂದರು.
ಬ್ರಹ್ಮಾವರದ ತಾವು ಉಡುಪಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದು ಹೇಗೆ ಎಂದು ಕೇಳಿದಾಗ, ನಾನೂ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದವನು ಎಂಬ ನೆಲೆಯಲ್ಲಿ ನಮ್ಮ ನಾಯಕರು ಗುರುತಿಸಿ ಅವಕಾಶ ನೀಡಿದ್ದಾರೆ. ಇದರಲ್ಲಿ ಕಾನೂನು ತೊಡಕುಗಳಿಲ್ಲ. ನಾಮನಿರ್ದೇಶನದಲ್ಲಿ ವ್ಯಾಪ್ತಿಗಳು ಬರುವುದಿಲ್ಲ. ಹೀಗಾಗಿ ನನಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥ ವಾಗಿ ನಿಭಾಯಿಸಲು ಪ್ರಯತ್ನಿಸುತ್ತೇನೆ ಎಂದರು.
ಬ್ರಹ್ಮಾವರವನ್ನು ಉಡುಪಿ ಪ್ರಾಧಿಕಾರದ ವ್ಯಾಪ್ತಿಗೆ ತರುವ ಯೋಜನೆ ಇದೆಯೇ ಎಂದ ಕೇಳಿದಾಗ, ಬ್ರಹ್ಮಾವರ ಪುರಸಭೆ ಯಾಗುವ ಹಂತದಲ್ಲಿದೆ. ಅದು ಬೆಳೆಯುತ್ತಿರುವ ಪಟ್ಟಣ. ಪುರಸಭೆಯಾದರೆ ಅದಕ್ಕೆ ಬೇರೆ ವ್ಯವಸ್ಥೆ ಇದೆ ಎಂದರು.