ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ರಾಷ್ಟ್ರೀಯ ಮಟ್ಟದ ಸನ್ಮಾನ: ಎಚ್.ಎಂ. ರೇವಣ್ಣ
ಉಡುಪಿ, ಸೆ.15: ಕುರುಬ ಜನಾಂಗದವರ ಅಖಿಲ ಭಾರತ ಮಟ್ಟದ ಸಂಘಟನೆಯಾದ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್‌ನ 9ನೇ ರಾಷ್ಟ್ರೀಯ ಸಮಾವೇಶ ಅಕ್ಟೋಬರ್ 2 ಮತ್ತು 3ರಂದು ಬೆಳಗಾವಿಯಲ್ಲಿ ನಡೆಯಲಿದೆ ಎಂದು ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ದೇಶದಾದ್ಯಂತದಿಂದ ಬರುವ ಸುಮಾರು ಐದು ಲಕ್ಷ ಮಂದಿ ಕುರುಬ ಜನಾಂಗದವರು ಈ ಎರಡು ದಿನಗಳ ಸಮಾವೇಶ ದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
2014ರಲ್ಲಿ ಗಾಂಧಿ ಜಯಂತಿಯ ದಿನದಂದು ಅಸ್ತಿತ್ವಕ್ಕೆ ಬಂದ ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್‌ನ ರಾಷ್ಟ್ರೀಯ ಸಮಾವೇಶವನ್ನು ಪ್ರತಿವರ್ಷ ಅದೇ ದಿನ ಕರೆಯಲಾಗುತ್ತದೆ. ತೆಲಂಗಾಣ, ಗುಜರಾತ್ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ರಾ. ಸಮಾವೇಶ ಈ ಬಾರಿ ಬೆಳಗಾವಿಯಲ್ಲಿ ನಡೆಯಲಿದೆ. ಅ.2ರಂದು ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆದರೆ, ಎರಡನೇ ದಿನದಂದು ರಾಷ್ಟ್ರೀಯ ಸಮಾವೇಶ ನಡೆಯಲಿದೆ ಎಂದು ಅವರು ವಿವರಿಸಿದರು.
ದೇಶದಲ್ಲೇ ಮೊದಲ ಬಾರಿ ಕುರುಬ ಸಮುದಾಯಕ್ಕೆ ಸೇರಿದ ಸಿದ್ಧರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಯಾಗಿ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ರಾಷ್ಟ್ರೀಯ ಮಟ್ಟದಲ್ಲಿ ಸನ್ಮಾನಿಸಲಾಗುತ್ತಿದೆ. ಸಮುದಾಯಕ್ಕೆ ಸೇರಿದ ಕೇಂದ್ರ ಸಚಿವರು, ಉತ್ತರ ಪ್ರದೇಶದ ಸಚಿವ ಅಜಿತ್ ಸಿಂಗ್, ಮಹಾರಾಷ್ಟ್ರದ ಹಾಲಿ ಮತ್ತು ಮಾಜಿ ಸಚಿವರು, ತಮಿಳುನಾಡು, ರಾಜಸ್ತಾನ, ಗೋವಾಗಳ ಸಚಿವರು ಹಾಗೂ ಮಾಜಿ ಸಚಿವರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದರು.
ರಾಜ್ಯಾದ್ಯಂತ ಹರಿದುಹಂಚಿಹೋಗಿದ್ದ ಕುರುಬ ಸಮಾಜವನ್ನು ಕಳೆದ 90ರ ದಶಕದಲ್ಲಿ ಸಿದ್ಧರಾಮಯ್ಯ ಅವರ ನೇತೃತ್ವ ದಲ್ಲಿ ಕನಕದಾಸ ಜಯಂತಿಯನ್ನು ನಡೆಸುವ ಮೂಲಕ ರಾಜ್ಯಾದ್ಯಂತ ಸಂಘಟಿಸಲಾಗಿತ್ತು. 1994ರಲ್ಲಿ ಕಾಗಿನೆಲೆ ಮಹಾಮಠ ಸ್ಥಾಪಿಸಲಾಗಿತ್ತು ಎಂದ ರೇವಣ್ಣ, ಆ ಬಳಿಕ ರಾಷ್ಟ್ರಮಟ್ಟದಲ್ಲಿ ಕುರುಬರ ಸಂಘಟನೆಯನ್ನು ಮಾಜಿ ಸಂಸದ ವಿಶ್ವನಾಥರ ನೇತೃತ್ವದಲ್ಲಿ ಕೈಗೊಂಡು 2014ರಲ್ಲಿ ಶೆಫರ್ಡ್ಸ್ ಇಂಡಿಯಾ ಇಂಟರ್‌ನ್ಯಾಷನಲ್ ಅಸ್ತಿತ್ವಕ್ಕೆ ಬಂದಿತ್ತು ಎಂದರು.
ಎಸ್‌ಟಿಗೆ ಸೇರ್ಪಡೆ: ರಾಜ್ಯದಲ್ಲಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಯ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ರೇವಣ್ಣ, ಈ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ವರದಿ ರಾಜ್ಯ ಸರಕಾರದ ಕೈಸೇರಿದ್ದು, ಅದಕ್ಕೆ ಕ್ಯಾಬಿನೆಟ್ ಸಮಿತಿಯಲ್ಲಿ ಒಪ್ಪಿಗೆ ನೀಡಲಾಗಿದೆ. ವರದಿಯನ್ನು ಶಿಫಾರಸ್ಸಿನೊಂದಿಗೆ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುರುಬರ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಂ.ನಾಗರಾಜು, ಬಸವರಾಜು, ಸಿದ್ಧಪ್ಪ ಐಹೊಳೆ, ಹನುಮಂತ ಜಿ.ಗೋಡಿ, ಬಸವರಾಜ ಕುರುಬರ್ ಮುಂತಾದವರು ಉಪಸ್ಥಿತರಿದ್ದರು.