ರಾಷ್ಟ್ರೀಯ ಕ್ರೀಡಾ ದಿನಾಚರಣೆ- ರಕ್ತದಾನ ಶಿಬಿರ ಉದ್ಘಾಟನೆ

Update: 2024-08-29 14:09 GMT

ಉಡುಪಿ: ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್, ಲಯನ್ಸ್ ಕ್ಲಬ್ ಮಿಡ್ಟೌನ್, ತೆಂಕನಿಡಿಯೂರ್ ಸ್ಪೋರ್ಟ್ಸ್ ಕ್ಲಬ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ರೇಂಜರ್ಸ್, ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ಕ್ರಾಸ್ ವಿಭಾಗಗಳ ಸಹಯೋಗದೊಂದಿಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಮತ್ತು ರಕ್ತದಾನ ಶಿಬಿರವನ್ನು ಕಾಲೇಜಿನ ಪಿ.ಜಿ. ಎ.ವಿ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಮನುಷ್ಯ ಆರೋಗ್ಯಕರವಾಗಿರ ಬೇಕಾದರೆ ಉತ್ತಮ ಆಹಾರ ಪದ್ಧತಿಯ ಜೊತೆಗೆ ದೈಹಿಕ ವ್ಯಾಯಾಮದ ಅಗತ್ಯವೂ ಇದೆ. ವಿದ್ಯಾರ್ಥಿಗಳು ತಮ್ಮನು ಬೇರೆ ಬೇರೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಕ್ರೀಡೆಯಿಂದ ದೇಹಕ್ಕೆ ಒಳ್ಳೆಯ ವ್ಯಾಯಾಮ ಸಿಗುವುದರ ಜೊತೆಗೆ ಕೊಲೆಸ್ಟ್ರಾಲ್ ಸಮಸ್ಯೆ, ರಕ್ತದ ಒತ್ತಡ, ಉದಾಸೀನತೆ ಯಂತಹ ಸಮಸ್ಯೆ ಯನ್ನು ಹೋಗಲಾಡಿಸಿ, ವಿದ್ಯಾರ್ಥಿಗಳಲ್ಲಿ ಉತ್ತಮ ಯೋಚನೆ ಮತ್ತು ಕ್ರೀಯಾಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಅಧ್ಯಕ್ಷ ಎಸ್.ಜಯಕರ ಶೆಟ್ಟಿ ಮಾತನಾಡಿ, ಜೀವ ಜಲವಾದ ರಕ್ತವನ್ನು ದಾನ ಮಾಡುವುದು ಅತ್ಯಂತ ಪುಣ್ಯದ ಮತ್ತು ಹೆಮ್ಮೆಯ ಕಾರ್ಯವಾಗಿದೆ. ಸ್ವಯಂ ಪ್ರೇರಿತ ರಕ್ತದಾನ ಸಮಾಜ ಸೇವೆಯ ಕೆಲಸ. ಹಲವು ಸಂಘ ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಉತ್ತಮ ಮಟ್ಟದಲ್ಲಿ ರಕ್ತ ನಿಧಿಯನ್ನು ಸಂಗ್ರಹಿಸು ತ್ತಿವೆಯಾದರು ಇಂದಿಗೂ ಅನೇಕರು ಬೇರೆ ಬೇರೆ ಕಾರಣಗಳಿಂದ ಸರಿಯಾದ ಸಮಕ್ಕೆ ರಕ್ತದ ಪೂರೈಕೆ ಆಗದೆ ಮರಣ ಹೊಂದುತ್ತಿರುವುದನ್ನು ಕಾಣಬಹುದಾಗಿದೆ ಎಂದರು.

ಕ್ರೀಡಾ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಅವರನ್ನು ಸನ್ಮಾನಿಸಲಾಯಿತು. ರಕ್ತದಾನ ಶಿಬಿರದಲ್ಲಿ ಕಾಲೇಜು ವಿದ್ಯಾರ್ಥಿನಿ ಯರು, ಹಳೆ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ತೆಂಕನಿಡಿಯೂರು ಸ್ಪೋರ್ಟ್ಸ್ ಸದಸ್ಯರು ಪಾಲ್ಗೊಂಡಿದ್ದರು.

ಅಧ್ಯಕ್ಷತೆಯನ್ನು ಕಾಲೇಜಿ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ ಎಸ್. ವಹಿಸಿದ್ದರು. ಲಯನ್ಸ್ ಕ್ಲಬ್ ಮಿಡ್ಟೌನ್ ಉಡುಪಿ ವಲಯ ಅಧ್ಯಕ್ಷ ಅನಂತ್ ಶೆಟ್ಟಿ, ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸುಶಾನ್ ಶೆಟ್ಟಿ, ಕಾಲೇಜಿನ ಎನ್‌ಎಸ್‌ಎಸ್ ಘಟಕದ ಯೋಜನಾಧಿಕಾರಿ ವಿದ್ಯಾ ಡಿ. ಉಪಸ್ಥಿತರಿದ್ದರು. ಕಾಲೇಜಿನ ಮಾನವಿಕ ವಿಭಾಗದ ಡೀನ್ ಪ್ರೊ.ನಿಕೇತನ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕರು ಡಾ.ರಾಮಚಂದ್ರ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು. ಮಣಿಪಾಲ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ದಿನೇಶ್ ಶೆಟ್ಟಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News