ಬೈಂದೂರು | ಎಟಿಎಂ ಕಾರ್ಡ್ ಬದಲಾಯಿಸುವ ಮೋಸದ ಜಾಲ: ಮೂವರಿಗೆ ಲಕ್ಷಾಂತರ ರೂ. ವಂಚನೆ

Update: 2024-01-10 07:49 GMT

ಬೈಂದೂರು, ಜ.10: ಎಟಿಎಂನಿಂದ ಹಣ ತೆಗೆದುಕೊಡುವುದಾಗಿ ನಂಬಿಸಿ ಕಾರ್ಡ್ ಪಡೆದು ಬದಲಾಯಿಸಿ, ಹಣ ಡ್ರಾ ಮಾಡಿ ವಂಚಿಸುವ ಜಾಲವೊಂದು ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಜ.9ರಂದು ಒಂದೇ ದಿನ ಈ ರೀತಿ ವಂಚನೆಗೆ ಒಳಗಾದವರು ನೀಡಿರುವ ದೂರಿನಂತೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಜ.9ರಂದು ಬೆಳಗ್ಗೆ 10 ಗಂಟೆಗೆ ಶಿರೂರು ಮಾರ್ಕೆಟ್ ಬಳಿಯ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಶಿರೂರಿನ ಚೈತ್ರಾ ಎಂಬವರಿಗೆ, ಬೆಳಗ್ಗೆ 10:15ಕ್ಕೆ ಶಿರೂರು ಅರ್ಬನ್ ಬ್ಯಾಂಕಿನ ಎಟಿಎಂನಲ್ಲಿ ಶಿರೂರಿನ ಬಲ್ಕೀಸ್ ಬಾನು ಎಂಬವರಿಗೆ ಹಾಗೂ ಬೈಂದೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಎಟಿಎಂನಲ್ಲಿ ಸಳ್ವಾಡಿ ಗ್ರಾಮದ ಚಂದ್ರಶೇಖರ ಎಂಬವರಿಗೆ ವಂಚಿಸಿರು ವುದಾಗಿ ದೂರಲಾಗಿದೆ.

ಗ್ರಾಹಕರ ಸೋಗಿನಲ್ಲಿ ಎಟಿಎಂ ಕೇಂದ್ರದೊಳಗೆ ಇರುವ ಇಬ್ಬರು ಅಪರಿಚಿತರು, ಎಟಿಎಂನಲ್ಲಿ ಹಣ ಪಡೆಯಲು ಸಾಧ್ಯವಾಗದ ಚೈತ್ರಾ, ಬಲ್ಕೀಸ್ ಬಾನು ಹಾಗೂ ಚಂದ್ರಶೇಖರ್ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಕಾರ್ಡ್ ಪಡೆದುಕೊಂಡಿದ್ದರು. ಬಳಿಕ ಹಣ ಬರುತ್ತಿಲ್ಲ ಎಂದು ಹೇಳಿ, ಅವರ ಕಾರ್ಡ್ ಗಳನ್ನು ಬದಲಾಯಿಸಿ ವಾಪಸ್ ಕೊಟ್ಟು ಅಲ್ಲಿಂದ ಹೊರಟು ಹೋಗಿದ್ದರು.

ಬಳಿಕ ಪರಿಶೀಲಿಸಿದಾಗ ಇವರೆಲ್ಲರ ಕಾರ್ಡ್ ಗಳು ಬದಲಾಗಿರುವುದು ಕಂಡು ಬಂದಿದ್ದು, ಬ್ಯಾಂಕಿನಲ್ಲಿ ವಿಚಾರಿಸಿದಾಗ ಚೈತ್ರಾರ ಖಾತೆಯಿಂದ 21 ಸಾವಿರ ರೂ., ಬಲ್ಕೀಸ್ ಬಾನು ಖಾತೆಯಿಂದ 5 ಸಾವಿರ ರೂ. ಮತ್ತು ಚಂದ್ರಶೇಖರ್ ಖಾತೆಯಿಂದ 2 ಲಕ್ಷ ರೂ. ಡ್ರಾ ಮಾಡಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬೈಂದೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪಿಗಳು ಹಿಂದಿಯಲ್ಲಿ ಮಾತನಾಡುತ್ತಿರುವುದರಿಂದ ಇವರು, ಹೊರರಾಜ್ಯದವರಾಗಿರುವ ಶಂಕೆ ವ್ಯಕ್ತವಾಗಿದೆ. ಅದೇ ದಿಕ್ಕಿನಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News