ಉಡುಪಿ: ಹಿಟ್ ಆ್ಯಂಡ್ ರನ್ ಹೊಸ ನಿಯಮ ವಿರೋಧಿಸಿ ಪ್ರತಿಭಟನೆ

Update: 2024-01-17 16:38 GMT

ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಕುಮಾರ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕ ಹಾಗೂ ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ವತಿಯಿಂದ ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಅಪಘಾತ ನಡೆಸಿದ ಚಾಲಕರಿಗೆ 10ಲಕ್ಷ ರೂ. ದಂಡ, 7 ವರ್ಷದ ಸಜೆ ಎಂಬ ನೂತನ ಕಾನೂನಿನ ವಿರುದ್ಧ ಹೆಜಮಾಡಿ ಟೋಲ್ ಗೇಟ್ ಬಳಿ ಇಂದು ಪ್ರತಿಭಟನಾ ಧರಣಿ ನಡೆಸಲಾಯಿತು.

ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಉಡುಪಿ ಜಿಲ್ಲಾಧ್ಯಕ್ಷ ಮನ್ಸೂರ್ ಅಖ್ತರ್ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಸರಕಾರ ಅವೈಜ್ಞಾನಿಕ ಕಾನೂನನ್ನು ತರಲು ಹೊರಟಿದೆ. ಇದು ಮನುಷ್ಯ ದ್ವೇಷಿ ಹಾಗೂ ಬಡಚಾಲಕರ ಹೊಟ್ಟೆಗೆ ಹೊಡೆಯುವ ಕಾನೂನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಚಾಲಕ ಬೇಕುಬೇಕೆಂದು ಅಪಘಾತಗಳನ್ನು ಮಾಡುವುದಿಲ್ಲ. ಆಕಸ್ಮಿಕವಾಗಿ ನಡೆದು ಹೋಗುವ ಅಪಘಾತಕ್ಕೆ ಚಾಲಕರನ್ನೇ ಗುರಿಯಾಗಿಸಿ ಕಾನೂನು ತರಲು ಹೊರಟಿರುವುದು ಅಕ್ಷಮ್ಯ ಎಂದು ದೂರಿದ ಅವರು, ಕೇಂದ್ರ ಸರಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ಅದರ ಒಳಗಾಗಿ ಮನುಷ್ಯ ಧ್ಚೇಷಿ ಕಾನೂನನ್ನು ಹಿಂಪಡೆಯಬೇಕು. ಇಲ್ಲವಾದರೆ ಎಲ್ಲಾ ಚಾಲಕರನ್ನು ಒಗ್ಗೂಡಿಸಿಕೊಂಡು ಉಡುಪಿ ಬಂದ್ ಮಾಡಿ ಉಗ್ರ ಹೋರಾಟವನ್ನು ಸಂಘಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರವೇ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಅನ್ಸಾರ್ ಅಹಮದ್ ಮಾತನಾಡಿ ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ಸರಕಾರಕ್ಕೆ ಇನ್ನೂ ಇದರ ತೀವ್ರತೆಯ ಪರಿಣಾಮ ತಟ್ಟಿಲ್ಲ. ಈ ಮದ್ಯೆ ಸರಕಾರ ಜನರಿಗೆ ಸುಳ್ಳು ಮಾಹಿತಿಯನ್ನು ನೀಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಉಡುಪಿ ಖಜಾಂಚಿ ಅಬ್ದುಲ್ ಮಜೀದ್ ಮಾತನಾಡಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೆಜಮಾಡಿ ಟೋಲ್‌ಗೇಟ್ ಬಳಿ ನೂರಾರು ಲಾರಿಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಪಡುಬಿದ್ರೆ ಪೊಲೀಸರು ಭೇಟಿ ನೀಡಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಪ್ರತಿಭಟನಾ ಧರಣಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಸಂಚಾಲಕ ಸುಧೀರ್ ಪೂಜಾರಿ, ಎಂ ಎಸ್ ಸಯ್ಯದ್ ನಿಜಾಮ್, ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್‌ನ ಪದಾಧಿಕಾರಿಗಳು, ಕರವೇ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News