ಮಣಿಪಾಲ: ನ್ಯಾನೋಮೇಟಿರಿಯಲ್ಸ್ ಬಳಕೆ ಬಗ್ಗೆ ಸಮ್ಮೇಳನ
ಮಣಿಪಾಲ: ಬಯೋಮೆಡಿಕಲ್‌ನಲ್ಲಿ ನ್ಯಾನೊ ಮೆಟೀರಿಯಲ್ ಗಳ ಬಳಕೆ ಕುರಿತಾದ ಎರಡು ದಿನಗಳ ಮೊದಲ ನೇಚರ್ ಸಮ್ಮೇಳನ ನೇಚರ್ ಕಮ್ಯುನಿಕೇಷನ್ಸ್ ಆ್ಯಂಡ್ ನೇಚರ್ ನ್ಯಾನೊಟೆಕ್ನಾಲಜಿ ಸಹಯೋಗದಲ್ಲಿ ಮಣಿಪಾಲದ ಮಾಹೆಯಲ್ಲಿ ನಡೆಯಿತು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್(ಮಾಹೆ) ಆಯೋಜಿಸಿದ್ದ ಈ ಸಮ್ಮೇಳನದಲ್ಲಿ ನ್ಯಾನೊಮೆಟೀರಿಯಲ್ ಕ್ಷೇತ್ರದ ವಿಶ್ವದ ಖ್ಯಾತನಾಮರು ಭಾಗವಹಿಸಿದ್ದರು. ಈ ಸಮ್ಮೇಳನವು ವಿಜ್ಞಾನಿಗಳು, ಸಂಶೋಧಕರು ಮತ್ತು ಉದ್ಯಮ ನಾಯಕರಿಗೆ ವೇದಿಕೆಯಾಗಿ ಕೆಲಸ ಮಾಡಿತು.
ನ್ಯಾನೋ ಕ್ಷೇತ್ರದ ವಿವಿಧ ಸಂಶೋಧಕರಿಗೆ ತಮ್ಮ ಮಹತ್ತರ ಸಂಶೋಧನೆ ಪ್ರದರ್ಶಿಸಲು, ಸಹಯೋಗ ಹೊಂದಲು ಮತ್ತು ನ್ಯಾನೊಮೆಟೀರಿಯಲ್ ಕ್ಷೇತ್ರದಲ್ಲಿನ ಪ್ರಮುಖ ಬಳಕೆಯಾದ ಥೆರನೊಸ್ಟಿಕ್ಸ್, ಬಯೋ-ಇಮೇಜಿಂಗ್, ಡ್ರಗ್ ಡೆಲಿವರಿ, ಲಸಿಕೆಗಳು ಮತ್ತು ಇಮ್ಯುನೊಥೆರಪಿಯಲ್ಲಿನ ಕೆಲ ಪ್ರಮುಖ ಸವಾಲುಗಳಿಗೆ ಆವಿಷ್ಕಾರಕ ಪರಿಹಾರಗಳನ್ನು ಕಂಡುಕೊಳ್ಳಲು ವೇದಿಕೆ ಒದಗಿಸಿತು.
ವಿಚಾರಗಳ ವಿನಿಮಯ ಮತ್ತು ಸಹಯೋಗದ ಯೋಜನೆಗಳನ್ನು ಪ್ರಾರಂಭಿಸಲು ಉತ್ತಮ ಪೂರಕ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಈ ಸಮ್ಮೇಳನವು ನ್ಯಾನೊಮೆಟೀರಿಯಲ್‌ಗಳು ಮತ್ತು ಮೆಡಿಸಿನ್ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖ ಸವಾಲುಗಳು ಮತ್ತು ಭರವಸೆಯ ಅವಕಾಶಗಳ ಕುರಿತು ಬೆಳಕನ್ನು ಚೆಲ್ಲಿತು.
ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಈ ಸಮ್ಮೇಳನದ ಯಶಸ್ಸಿನ ಕುರಿತು ತೃಪ್ತಿ ವ್ಯಕ್ತಪಡಿಸಿದರು. ಈ ಸಮ್ಮೇಳನವು ಹೊಸ ಹೊಸ ವಿಷಯಗಳ ಕಣಜವಾಗಿದ್ದು, ಕ್ಷೇತ್ರದ ಅದ್ಭುತ ಮನಸ್ಸುಗಳನ್ನು ಒಟ್ಟಿಗೆ ತಂದಿದೆ. ಇಲ್ಲಿ ಪ್ರದರ್ಶಿಸಲಾದ ವೈಜ್ಞಾನಿಕ ಸಂಶೋಧನೆಯ ಆಸಕ್ತಿಯು ಭವಿಷ್ಯದ ಮಹತ್ತರ ಸಾಧನೆಗಳು ಮತ್ತು ಸುಧಾರಣೆಗಳಿಗೆ ನಾಂದಿ ಹಾಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ನೇಚರ್ ಕಮ್ಯುನಿಕೇಷನ್‌ನ ಹಿರಿಯ ಸಂಪಾದಕ ಡಾ.ಐಶ್ವರ್ಯ ಸುಂದರಂ ಈ ಕಾರ್ಯಕ್ರಮದಲ್ಲಿ ಕೈಜೋಡಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ವಿಷಯಗಳ ವೈವಿಧ್ಯತೆ ಮತ್ತು ಇಲ್ಲಿ ಕಂಡುಬಂದ ಅನ್ವೇಷಣಾ ಆಸಕ್ತಿ ಬಯೋಮೆಡಿಕಲ್ ಅಪ್ಲಿಕೇಷನ್‌ಗಳಲ್ಲಿ ನ್ಯಾನೊಮೆಟೀರಿಯಲ್‌ಗಳ ಗಡಿಗಳನ್ನು ವಿಸ್ತರಿಸುವಲ್ಲಿ ಖಂಡಿತ ಯಶಸ್ವಿಯಾಗುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.