ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ
ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಇದರ ವತಿಯಿಂದ ಇಂದು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವ ಎಸ್.ಸಿ. ಎಸ್.ಟಿ ಸಮುದಾಯ ಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕೂಡಲೇ ವಾಪಾಸ್ಸು ನೀಡಬೇಕು. ಮೂಡಾ ಹಗರಣವನ್ನು ಸಿ.ಬಿ.ಐ. ತನಿಖೆಗೆ ವಹಿಸಬೇಕು. ಎ.ಸಿ.ಎಸ್. ಮಣಿವಣ್ಣನನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು. ವಸತಿ ಶಾಲೆಗಳ ನೇಮಕದಲ್ಲಿ ವಿಧಿಸಿರುವ ನಿಬಂಧನೆಗಳನ್ನು ಕೂಡಲೇ ರದ್ದು ಪಡಿಸಿ ಎಲ್ಲಾ ಮಕ್ಕಳಿಗೆ ಅವಕಾಶ ಕಲ್ಪಿಸಿಕೊಡಬೇಕು.
ಮಹರ್ಷಿ ವಾಲ್ಮೀಕಿ ನಿಗಮದ ಅವ್ಯವಹಾರದ ಹೊಣೆಯನ್ನು ಮುಖ್ಯ ಮಂತ್ರಿಗಳು ವಹಿಸಿಕೊಳ್ಳಬೇಕು. ಭ್ರಷ್ಟರ ಆಸ್ತಿಗಳನ್ನು ಸರಕಾರ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು. ಬೌದ್ಧ ಸಮಾಜದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಕರ್ನಾಟಕ ಬೌದ್ಧ ಧರ್ಮ ಅಭಿವೃದ್ಧಿ ನಿಗಮವನ್ನು ಕೂಡಲೇ ಸ್ಥಾಪಿಸಬೇಕು. ಬೌದ್ಧಧರ್ಮಕ್ಕೆ ಮತಾಂತರಗೊಂಡಿರುವ (ನಮೂನೆ೧) ಸಂವಿಧಾನ ಕಾಯಿದೆ ಪ್ರಕಾರ ಜಾತಿ ಪ್ರಮಾಣ ಪತ್ರದಲ್ಲಿ ಧರ್ಮದ ಉಲ್ಲೇಖ ಇರುವಂತೆ ಮಾರ್ಪಾಡು ಮಾಡಬೇಕು. ಪ್ರತೀ ಹಳ್ಳಿಯ ಎಸ್.ಸಿ. ಎಸ್.ಟಿ ಸಮುದಾಯಗಳಿಗೆ ಸ್ಮಶಾನಕ್ಕೆ ಭೂಮಿಯನ್ನು ನಿಗದಿಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿಯನ್ನು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಹಾವಂಜೆ, ರಿಪಬ್ಲಿಕ್ ಪಕ್ಷದ ಉಡುಪಿ ಜಿಲ್ಲಾಧ್ಯಕ್ಷ ಸದಾಶಿವ ಶೆಟ್ಟಿ ಹೇರೂರು, ಜಿಲ್ಲಾ ಸಂಘಟನಾ ಸಂಚಾಲಕ ಗೋಪಾಲ್ ಶಿವಪುರ, ರಮೇಶ್ ಮಾಬಿಯಾನ್, ಪ್ರಭಾಕರ್ ಅಮ್ಮುಂಜೆ, ಬೌದ್ಧ ಧಮ್ಮಾಚಾರಿ ಶಂಭು ಸುವರ್ಣ, ಸದಸ್ಯರಾದ ಅನಿಲ್ ಫೆರ್ನಾಂಡಿಸ್, ಸುಜಾತ ಹಾವಂಜೆ, ಸುನೀತಾ ಒಳಗುಡ್ಡೆ, ನಾರಾಯಣ್ ಒಳಗುಡ್ಡೆ, ಶೇಖರ್ ಮೂಡುಕುಡೂರು, ಪೃಥ್ವಿ ಒಳಗುಡ್ಡೆ ಉಪಸ್ಥಿತರಿದ್ದರು.