ಉಡುಪಿ ಪಂಚಾಯತ್‌ರಾಜ್ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ ಮುಷ್ಕರ ಆರಂಭ
ಉಡುಪಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಆರ್‌ಡಿಪಿಆರ್ ಕುಟುಂಬದ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಮುಷ್ಕರವನ್ನು ಇಂದಿನಿಂದ ಆರಂಭಿಸಲಾಗಿದೆ.
ಮಣಿಪಾಲದ ರಜತಾದ್ರಿಯಲ್ಲಿರುವ ಉಡುಪಿ ಜಿಲ್ಲಾ ಪಂಚಾಯತ್ ಕಚೇರಿ ಎದುರು ಬೆಳಗ್ಗೆಯಿಂದ ಸಂಜೆ 4.30ರವರೆಗೆ ನಡೆದ ಧರಣಿಯಲ್ಲಿ ಜಿಲ್ಲೆಯ ೧೫೫ ಗ್ರಾಮ ಪಂಚಾಯತ್‌ಗಳ ಪಿಡಿಓ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯ ಕರು, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ಕರವಸೂಲಿಗಾರರು, ಪಂಪ್ ಆಪರೇಟರ್ ಸೇರಿದಂತೆ ಎಲ್ಲ ನೌಕರರು ಪಾಲ್ಗೊಂಡಿದ್ದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಮಂಜುನಾಥ್ ಪಿ.ಶೆಟ್ಟಿ, ರಾಜ್ಯದ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಡೆಟ್ ಗ್ರೂಪ್ ಬಿ ದರ್ಜೆಗೆ ಉನ್ನತಿಕರಿಸಬೇಕು. ೭ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಓಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮವನ್ನು ಕೈಬಿಡ ಬೇಕು. ಪಿಡಿಓಗಳ ಜೇಷ್ಠತಾ ಪಟ್ಟಿ ಮತ್ತು ಬಡ್ತಿಯಲ್ಲಿನ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಅದೇ ರೀತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವೃಂದ, ಗ್ರಾಪಂ ಸದಸ್ಯರ ಒಕ್ಕೂಟ, ಗ್ರೇಡ್-೧ ಹಾಗೂ ಗ್ರೆಡ್-೨ ಕಾರ್ಯದರ್ಶಿ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆರಪೇಟರ್, ಕರವಸೂಲಿಗಾರ, ನೀರಘಂಟಿ, ಜವಾನರ, ಸ್ವಚ್ಛತಾ ಗಾರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಪತ್ರಾಂಕಿತ ಅಧಿಕಾರಿಗಳ ಬೇಡಿಕೆಗಳನ್ನು ಕೂಡ ಸರಕಾರ ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.
ಧರಣಿಯಲ್ಲಿ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ರಾವ್, ರಾಜ್ಯ ಪರಿಷತ್ ಸದಸ್ಯ ಸಿದ್ದೇಶ್, ಪಂಚಾಯತ್ ನೌಕರರ ಸಂಘದ ಜಿಲ್ಲಾಧ್ಯಕ್ಷ ರಮೇಶ್, ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷೆ ವಸಂತಿ, ಗ್ರೇಡ್-೧ ಕಾರ್ಯ ದರ್ಶಿಗಳ ಸಂಘದ ಜಿಲ್ಲಾಧ್ಯಕ್ಷ ಶಿವರಾಜ್ ಮೊದಲಾದವರು ಉಪಸ್ಥಿತರಿದ್ದರು.
’ಕಳೆದ ನಾಲ್ಕು ದಿನಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರನ್ನು ಹೊರತುಪಡಿಸಿ ಬೇರೆ ಯಾವುದೇ ಸೇವೆಯನ್ನು ನೀಡದೆ ಯಥಾ ಸ್ಥಿತಿಯನ್ನು ಮುಂದುವರಿಸಲಾಗಿದೆ. ಗ್ರಾಪಂ ಎಲ್ಲ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸುತ್ತಿದ್ದಾರೆ. ಇಂದು ಸಂಜೆ ೪.೩೦ರವರೆಗೆ ಧರಣಿ ನಡೆಸಿದ್ದು, ನಾಳೆಯೂ ಮುಂದುವರೆಯಲಿದೆ. ಈ ಹೋರಾಟವು ನಮ್ಮ ಎಲ್ಲ ಬೇಡಿಕೆಗಳು ಈಡೇರಿರುವವರೆಗೆ ಹಾಗೂ ರಾಜ್ಯ ಸಂಘದಿಂದ ಸೂಕ್ತ ನಿರ್ದೇಶನ ಬರುವವರೆಗೆ ಅನಿರ್ದಿಷ್ಟ ಅವಧಿಗೆ ಮುಂದುವರೆಯಲಿದೆ’
-ಮಂಜುನಾಥ ಪಿ.ಶೆಟ್ಟಿ, ಅಧ್ಯಕ್ಷರು,
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ಉಡುಪಿ