ಹಿರಿಯ ಯಕ್ಷಗಾನ ಕಲಾವಿದ ಗೋವಿಂದ ಭಟ್‌ಗೆ ಪ್ರಶಸ್ತಿ ಪ್ರದಾನ

Update: 2024-10-07 13:44 GMT

ಉಡುಪಿ, ಅ.7: ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನ ಬೈಲೂರು ಇದರ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಆದರ್ಶ ಶಿಕ್ಷಕ, ಪ್ರಸಂಗಕರ್ತ ಸೀತಾನದಿ ಗಣಪಯ್ಯ ಶೆಟ್ಟಿ ಅವರ 37ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್ ಸೂರಿಕುಮೇರು ಅವರಿಗೆ ಪ್ರಶಸ್ತಿ ಪ್ರದಾನ ಮಾಡ ಲಾಯಿತು.

ಸೀತಾನದಿ ಗಣಪಯ್ಯ ಶೆಟ್ಟಿ ಅವರ ಸಂಸ್ಮರಣೆ ಮಾಡಿದ ಉದ್ಯಮಿ ಪೊಲ್ಯ ಉಮೇಶ್ ಶೆಟ್ಟಿ, ಭಾರತೀಯ ಸಂಸ್ಕೃತಿಯ ಉತ್ತುಂಗದ ಕಲೆ ಯಕ್ಷಗಾನ. ಜ್ಞಾನ ಮತ್ತು ಸಾಹಿತ್ಯದ ನಿರಂತರ ಕೂಡುಕೊಳ್ಳುವಿಕೆ ಬಗ್ಗೆ ಪ್ರಥಮವಾಗಿ ಹೇಳಿದ ವ್ಯಕ್ತಿ ಗಣಪಯ್ಯ ಶೆಟ್ಟಿ. ಸರಳ, ಸಾತ್ವಿಕ ಜೀವನ ನಡೆಸಿದ ಗಣಪಯ್ಯ ಶೆಟ್ಟಿ ಅವರ ಜೀವನ ಯಕ್ಷಗಾನದ ಚಾರಿತ್ರಿಕ ಸಾಕ್ಷ್ಯವಾ ಗಿತ್ತು. 20ನೇ ಶತಮಾನದ ಯಕ್ಷಗಾನ ಕ್ಷೇತ್ರದ ವಿಸ್ಮಯ ಇತಿಹಾಸ ಇವರದ್ದಾಗಿದೆ ಎಂದರು.

ಪ್ರತಿಷ್ಠಾನದ ಉಪಾಧ್ಯಕ್ಷ ಎಸ್.ವಿ.ಉದಯ ಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿ, ಬಡಗಬೆಟ್ಟು, ತೆಂಕತಿಟ್ಟು ವಿನ ಶ್ರೇಷ್ಠ ಕಲಾವಿದ ಗೋವಿಂದ ಭಟ್, ಯಕ್ಷಗಾನ ಅಕಾಡೆಮಿ ನೀಡುವ ಪಾರ್ತಿಸುಬ್ಬ ಪ್ರಶಸ್ತಿಗೆ ಅತ್ಯಂತ ಯೋಗ್ಯವಾದ ವ್ಯಕ್ತಿ. ಇವರು ಸಾವಿರಾರು ಮಂದಿ ಶಿಷ್ಯರನ್ನು ತಯಾರು ಮಾಡಿದ ಅದ್ಭುತ ಕಲಾವಿದ ಎಂದು ಹೇಳಿದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ ಶೆಟ್ಟಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಪಿ.ಕಿಶನ್ ಹೆಗ್ಡೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ, ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಪ್ರತಿಷ್ಠಾನದ ಸಲಹೆಗಾರ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಭುವನ ಪ್ರಸಾದ್ ಹೆಗ್ಡೆ ವಂದಿಸಿದರು. ಸಂಚಾಲಕ ಸೀತಾ ನದಿ ವಿಠಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News