ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿರ್ವಹಣೆ ಕೊರತೆ!

Update: 2025-03-18 22:22 IST
ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿರ್ವಹಣೆ ಕೊರತೆ!
  • whatsapp icon

ಉಡುಪಿ, ಮಾ.18: ಹೆಸರಿಗೆ 30 ಕೋಟಿ ರೂ. ವೆಚ್ಚದ ಸರ್ವ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ. ಆದರೆ ಗಬ್ಬು ನಾರುತ್ತಿರುವ ಶೌಚಾಲಯ ಗಳು, ಮದ್ಯದ ಬಾಟಲಿಗಳು, ಎಲ್ಲೆಂದರಲ್ಲಿ ಕಸದ ರಾಶಿ, ಕಾರ್ಯನಿರ್ವಹಿಸದ ಎಸ್ಕಲೇಟರ್‌ಗಳು ನಿಲ್ದಾಣದಲ್ಲಿನ ನಿರ್ವಹಣೆ ಕೊರತೆಗೆ ಸಾಕ್ಷಿಯಾಗಿದೆ.

ಇದು ಬನ್ನಂಜೆಯಲ್ಲಿರುವ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಉಡುಪಿ ಜಿಲ್ಲಾ ಅನುಷ್ಟಾನ ಸಮಿತಿ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದಾಗ ಕಂಡುಬಂದ ಅವ್ಯವಸ್ಥೆಗಳು. ಹೀಗೆ ನಿರ್ವಹಣೆ ಕೊರತೆಯಿಂದ ಮೂರು ವರ್ಷಗಳ ಹಿಂದೆ ಉದ್ಘಾಟನೆಗೊಂಡ ನಿಲ್ದಾಣವು ಅವ್ಯವಸ್ಥೆಯ ಆಗರವಾಗಿದೆ.

ಇಂದು ನಡೆದ ಸಮಿತಿಯ ಮೊದಲ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಸಮಸ್ಯೆಗಳ ಕುರಿತು ಚರ್ಚೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ನೇತೃತ್ವದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ, ಗೀತಾ ವಾಗ್ಳೆ, ಸತೀಶ್ ಜಪ್ತಿ, ಉಡುಪಿ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಬ್ರಹ್ಮಾವರ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ ಭೇಟಿ ನೀಡಿದಾಗ ಈ ದೃಶ್ಯಗಳು ಕಂಡುಬಂದವು.

ಶೌಚಾಲಯಕ್ಕೆ ಭೇಟಿ ನೀಡಿದಾಗ ಶುಚಿತ್ವದ ಕೊರತೆಯಿಂದ ಗಬ್ಬು ವಾಸನೆ ಬೀರುತ್ತಿತ್ತು. ಪುರುಷರ ಶೌಚಾಲಯದಲ್ಲಿ ಬಿಯರ್ ಬಾಟಲಿ ಹಾಗೂ ಮಹಿಳೆ ಶೌಚಾಲಯದಲ್ಲಿ ಕಸದ ರಾಶಿ ಕಂಡುಬಂತು. ಕೂಡಲೇ ಸಮಿತಿಯವರು ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡು ಶುಚಿತ್ವ ಕಾಪಾಡುವಂತೆ ಸೂಚನೆ ನೀಡಿದರು. ಅದೇ ರೀತಿ ವಿಕಲಚೇತನರ ಶೌಚಾಲಯದಲ್ಲಿ ಫ್ಲೇಶ್ ವ್ಯವಸ್ಥೆ ಇಲ್ಲದಿರುವುದು ಮತ್ತು ಗಾಲಿ ಕುರ್ಚಿಯನ್ನು ಬೇರೆಲ್ಲೋ ಇಟ್ಟಿರುವುದಕ್ಕೆ ಸಮಿತಿಯವರು ಅಸಮಾಧಾನ ವ್ಯಕ್ತಪಡಿಸಿದರು.

ಪಾರ್ಕಿಂಗ್ ಪ್ರದೇಶದಲ್ಲಿ ಗಂಟೆ ಲೆಕ್ಕದಲ್ಲಿ ಹಣ ಪಡೆದರೂ ಶುಚಿತ್ವ ಕಾಪಾಡುತ್ತಿರಲಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿಗಳು ಕಂಡುಬಂದವು. ಅದೇ ರೀತಿ ನೆಲ ಮಹಡಿಯಿಂದ ಮೊದಲ ಮಹಡಿಗೆ ಹೋಗಲು ಇರುವ ಎರಡೂ ಎಕ್ಸಲೇಟರ್‌ನ್ನು ಬಂದ್ ಮಾಡಿ ಇಡಲಾಗಿತ್ತು. ವೃದ್ಧರು ಮಹಡಿ ಹತ್ತಿ ಹೋಗಲು ಕಷ್ಟಪಡುತ್ತಿರುವುದು ಸಮಿತಿಯವರ ಗಮನಕ್ಕೆ ಬಂತು.

ಮೇಲಿನ ಮಹಡಿಯನ್ನು ಬೀಗ ಹಾಕಿ ಬಂದ್ ಮಾಡಲಾಗಿದೆ. ಅಲ್ಲಿ ಯಾವುದೇ ನಿರ್ವಹಣೆ ಇಲ್ಲದೆ ಜೇಡರ ಬಲೆಯಿಂದ ಆವರಿಸಿದೆ. ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಿರುವ ಈ ನಿಲ್ದಾಣದಲ್ಲಿ ಸ್ವಚ್ಛತೆ ನಿರ್ವಹಣೆ ಇಲ್ಲದಿರುವುದು ಸಮಿತಿಯ ಆಕ್ರೋಶಕ್ಕೆ ಕಾರಣವಾಯಿತು. ಉರಿ ಬಿಸಿಲಿನಲ್ಲೂ ಪ್ರಯಾಣಿಕರು ಬಸ್ ಕಾಯುತ್ತಿದ್ದರೂ ಫ್ಯಾನ್ ಹಾಕದಿರುವ ಬಗ್ಗೆಯೂ ಸಮಿತಿ ಯವರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಸಹಾಯಕ ಸಂಚಾರ ವ್ಯವಸ್ಥಾಪಕಿ ನಿರ್ಮಲ, ಉಡುಪಿ ಡಿಪ್ಪೋ ಪ್ರಭಾರ ವ್ಯವಸ್ಥಾಪಕ ಅಶೋಕ್ ಹೆಗ್ಡೆ, ನಿಲ್ದಾಣದ ಸಂಚಾರ ನಿರೀಕ್ಷಕ ರವೀಂದ್ರ ಮೊದಲಾದವರು ಹಾಜರಿದ್ದರು.

‘ಗ್ಯಾರಂಟಿ ಯೋಜನೆ ಅನುಷ್ಠಾನ ಜಿಲ್ಲಾ ಸಮಿತಿಯ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಗ್ಗೆ ಚರ್ಚೆಗಳು ನಡೆದಿದ್ದು, ಅದರಂತೆ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಶಕ್ತಿ ಯೋಜನೆ ಮೂಲಕ ಉಡುಪಿ ಜಿಲ್ಲೆಯಲ್ಲಿ ತಿಂಗಳಿಗೆ ಸುಮಾರು 11ಲಕ್ಷಕ್ಕೂ ಅಧಿಕ ಮಹಿಳೆಯರು ಪ್ರಯಾಣ ಮಾಡುತ್ತಾರೆ. ಅದಕ್ಕೆ ಸರಕಾರ ತಿಂಗಳಿಗೆ 20 ಕೋಟಿ ರೂ. ಹಣ ಪಾವತಿ ಮಾಡುತ್ತದೆ. ಈ ರೀತಿ ಸುಸಜ್ಜಿತ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಸರಿಯಾದ ಅನುಕೂಲ ಸಿಗುತ್ತಿಲ್ಲ. ಶೌಚಾಲಯದಲ್ಲಿ ಶುಚಿತ್ವ ಇಲ್ಲ. ಈ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದೇವೆ. ಮುಂದಿನ ವಾರದೊಳಗೆ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ’

-ಅಶೋಕ್ ಕುಮಾರ್ ಕೊಡವೂರು, ಅಧ್ಯಕ್ಷರು,
ಗ್ಯಾರಂಟಿ ಯೋಜನೆಗಳ ಉಡುಪಿ ಜಿಲ್ಲಾ ಅನುಷ್ಟಾನ ಸಮಿತಿ

"ನಿಲ್ದಾಣದ ಶುಚಿತ್ವದ ನಿರ್ವಹಣೆಯನ್ನು ಗುತ್ತಿಗೆ ನೀಡಲಾಗಿದೆ. ಅದನ್ನು ಸರಿಯಾಗಿ ಮಾಡಬೇಕಾಗಿರು ವುದು ಅವರ ಜವಾಬ್ದಾರಿಯಾಗಿದೆ. ಆದರೆ ಕೆಲವೊಂದು ಕಡೆ ಸಮಸ್ಯೆಗಳು ಕಂಡುಬಂದಿವೆ. ಈ ಕುರಿತು ಅವರಿಗೆ ನೋಟೀಸ್ ಜಾರಿ ಮಾಡಲಾಗುವುದು"

-ನಿರ್ಮಲ, ಸಹಾಯಕ ಸಂಚಾರ ವ್ಯವಸ್ಥಾಪಕಿ, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News