ಬಜೆಟ್‌ನಲ್ಲಿ ಉಡುಪಿ ಕಡೆಗಣನೆ; ಬಿಜೆಪಿ ಪ್ರತಿಭಟನೆ

Update: 2025-04-01 18:26 IST
ಬಜೆಟ್‌ನಲ್ಲಿ ಉಡುಪಿ ಕಡೆಗಣನೆ; ಬಿಜೆಪಿ ಪ್ರತಿಭಟನೆ
  • whatsapp icon

ಉಡುಪಿ: ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಾರ್ಯಕರ್ತರು ಸರಕಾರಿ ಸೇವೆಗಾಗಿ ಅಧಿಕಾರಿಗಳ ಬಳಿಗೆ ಹೋದರೇ ಅವರನ್ನು ಕಡೆಗಣಿಸಲಾಗುತ್ತಿದೆ. ಮಣಿಪಾಲ ಠಾಣೆಯ ಸಿಬ್ಬಂದಿ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಪಿಎಸ್‌ಐ ಗಾಂಜಾ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ದ್ದಾನೆ. ಖಾಕಿ ರೌಡಿಸಂ ಇಲ್ಲಿ ನಡೆಯುವುದಿಲ್ಲ ಎಂದು ಶಾಸಕ ಯಶ್ಪಾಲ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಬಜೆಟ್‌ನಲ್ಲಿ ಉಡುಪಿ ಜಿಲ್ಲೆಯ ಕಡೆಗಣನೆ ಹಾಗೂ ಮಲತಾಯಿ ಧೋರಣೆ ಖಂಡಿಸಿ ಬಿಜೆಪಿ ಉಡುಪಿ ನಗರ ಘಟಕ ವತಿಯಿಂದ ನಡೆದ್ದ ಪ್ರತಿಭಟನಾ ಮೆರವಣಿಗೆ ಹಾಗೂ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಈ ಜಿಲ್ಲೆಯ ಜನತೆ ಬುದ್ದಿವಂತರಾಗಿದ್ದು, ಖಾಕಿಗೆ ಗೌರವ ಕೊಡುತ್ತಾರೆ. ಅಧಿಕಾರಿಗಳು, ಕಾನೂನಿಗೆ ವಿಶೇಷ ಗೌರವವನ್ನು ನೀಡುವವರು ಇದೇ ಜಿಲ್ಲೆಯವರು. ಆದರೆ ಇಲ್ಲಿನ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಾ, ಸುಖಾ ಸುಮ್ಮನೆ ಅಮಾಯಕರ ಮೇಲೆ ದೌರ್ಜನ್ಯ ಎಸಗಿದರೆ ಸುಮ್ಮನೆ ಕುಳಿತು ಕೊಳ್ಳುವುದಿಲ್ಲ ಎಂದವರು ಎಚ್ಚರಿಕೆ ನೀಡಿದರು.

ಜಿಲ್ಲೆಯ ಐವರು ಶಾಸಕರು ಬಿಜೆಪಿಯವರು ಎಂಬ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಉಡುಪಿಯನ್ನು ಕಡೆಗಣಿಸುತ್ತಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಮುಂದಿನ ಬಜೆಟ್ ನಲ್ಲಿ ಉಡುಪಿ ಜಿಲ್ಲೆಯನ್ನು ಪರಿಗಣಿಸಿ, ವಿಶೇಷ ಅನುದಾನ ಬಿಡುಗಡೆ ಗೊಳಿಸಬೇಕು. ಇಲ್ಲವಾದಲ್ಲಿ ಉಡುಪಿಗರ ತಾಕತ್ತನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಲು ಸಿದ್ದರಿದ್ದೇವೆ ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಉಡುಪಿ ಜಿಲ್ಲೆ ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಸಲ್ಲಿ ಸುವ ಜಿಲ್ಲೆಗಳಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಇಲ್ಲಿನ ಜನರಿಗೆ ಯಾವುದೇ ಉಪಯೋಗಿ ಯೋಜನೆ ನೀಡಿಲ್ಲ. ಬಜೆಟ್ ಪೂರ್ವದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಜಿಲ್ಲೆಯ ವಿವಿಧ ಅಭಿವೃದ್ಧಿಗೆ ಸಹಕರಿಸುವಂತೆ ವಿನಂತಿಸಿದ್ದೆವು. ಆದರೆ ಜಿಲ್ಲೆಗೆ ಬಿಡಿಗಾಸು ನೀಡಿಲ್ಲ. ಆದ್ದರಿಂದ ಸಿದ್ದರಾಮಯ್ಯ ಉಡುಪಿ ಜಿಲ್ಲೆಯ ಜನರ ಕ್ಷಮೆ ಯಾಚಿಸಬೇಕು ಎಂದರು.

ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ ಕುಂದಾಪುರ, ಕಾರ್ಕಳ ಶಾಸಕ ವಿ.ಸುನಿಲ್‌ಕುಮಾರ್ ಮಾತನಾಡಿದರು. ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ಗುರ್ಮೆ ಸುರೇಶ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕಿಶೋರ್‌ಕುಮಾರ್ ಪುತ್ತೂರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ದಿನೇಶ ಅಮೀನ್, ಮಂಗಳೂರು ವಿಭಾಗ ಪ್ರಮುಖ ಉದಯಕುಮಾರ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಮುಖಂಡರಾದ ದಿನಕರಬಾಬು, ದಿನಕರ ಶೆಟ್ಟಿ, ಶಿವಕುಮಾರ ಅಂಬಲಪಾಡಿ, ರೇಷ್ಮಾ ಶೆಟ್ಟಿ, ಸಂಧ್ಯಾ ರಮೇಶ, ವೀಣಾ ಶೆಟ್ಟಿ, ನಗರಸಭಾ ಸದಸ್ಯ ಗಿರೀಶ ಅಂಚನ್, ರಾಜೀವ ಕುಲಾಲ್, ಸುಪ್ರಸಾದ್ ಶೆಟ್ಟಿ ಬೈಕಾಡಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News