ಮಹಾಲಕ್ಷ್ಮೀ ಅವ್ಯವಹಾರ ಪ್ರಕರಣ ಮುಚ್ಚಿ ಹಾಕಲು ಯತ್ನ: ಮಾಜಿ ಶಾಸಕ ರಘುಪತಿ ಭಟ್ ಆರೋಪ

ಉಡುಪಿ, ಎ.7: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಮಲ್ಪೆ ಶಾಖೆಯ ಅವ್ಯವಹಾರ ಕುರಿತ ಕಲಂ 64ರಡಿಯಲ್ಲಿ ನಡೆಯುತ್ತಿರುವ ವಿಚಾರಣೆಯು ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ. ಆದುದರಿಂದ ಈ ವಿಚಾರಣೆ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ದಾಖಲೆಗಳಲ್ಲಿನ ನಕಲಿ ಸಹಿ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ಮೂಲಕ ಕೂಡಲೇ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ಆಗ್ರಹಿಸಿದ್ದಾರೆ.
ಉಡುಪಿ ಬನ್ನಂಜೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಸೋಮವಾರ ನಡೆದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಸಂತ್ರಸ್ತರ ಹೋರಾಟ ಸಮಿತಿ ಉಡುಪಿ ಇದರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಈ ವಿಚಾರಣೆ ಮುಗಿಯುವವರೆಗೆ ಬ್ಯಾಂಕಿನವರು ಸಂತ್ರಸ್ತರಿಂದ ಸಾಲ ವಸೂಲಾತಿ ಮಾಡುವುದನ್ನು ಹಾಗೂ ಕಿರುಕುಳ ನೀಡುವುದನ್ನು ತಡೆಹಿಡಿಯಬೇಕು. ಈ ವಿಚಾರಣೆಯಲ್ಲಿ ನ್ಯಾಯ ಸಿಗದಿದ್ದರೆ ಹೈಕೋರ್ಟ್ ರಿಟ್ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಈ ಹೋರಾಟದಲ್ಲಿ ನಾವು ಸಂತ್ರಸ್ತ ಜೊತೆ ನ್ಯಾಯ ಸಿಗುವವರೆಗೆ ಇರುತ್ತೇನೆ ಎಂದರು.
ಮಹಾಲಕ್ಷ್ಮೀ ಬ್ಯಾಂಕ್ ಅವ್ಯವಹಾರವು ಸಹಕಾರಿ ಕ್ಷೇತ್ರಕ್ಕೆ ಬಹಳ ದೊಡ್ಡ ಕಪ್ಪು ಚುಕ್ಕೆಯಾಗಿದೆ. ಇಂದು ಸಹಕಾರಿ ಕ್ಷೇತ್ರ ಬಹಳಷ್ಟು ಭ್ರಷ್ಟ ಆಗಿದೆ. ಯಶ್‌ಪಾಲ್ ಸುವರ್ಣ ಕೇವಲ ಬ್ಯಾಂಕಿನ ಅಧ್ಯಕ್ಷರಾಗಿರದೆ ಕ್ಷೇತ್ರ ಶಾಸಕರು ಕೂಡ ಆಗಿದ್ದಾರೆ. ಆದುದರಿಂದ ಅವರಿಗೆ ಈ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಕೂಡ ಇದೆ. ಈ ನಿಟ್ಟಿನಲ್ಲಿ ಅವರು ಸಂತ್ರಸ್ತರನ್ನು ಕರೆಸಿ, ಅವರ ಅಹವಾಲು ಆಲಿಸಿ ನ್ಯಾಯ ಕೊಡಿಸುವ ಕಾರ್ಯ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಇದೊಂದು ದೊಡ್ಡ ಹಗರಣ. ಇದರಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮೆಲ್ಲರ ಉದ್ದೇಶವಾಗಿದೆ. ಇದರ ತನಿಖೆಯಲ್ಲಿ ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಸಂತ್ರಸ್ತರ ಜೊತೆ ಎಂದಿಗೂ ಇರುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ನಾಗೇಂದ್ರ ಪುತ್ರನ್ ಕೋಟ, ಅಫ್ರೀನ್, ದೀಪಕ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು. ಶಿವಪ್ರಸಾದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಮರು ವಿಚಾರಣೆಗೆ ಒಪ್ಪಿಗೆ: ನಾಗೇಂದ್ರ ಪುತ್ರನ್
ಕಲಂ 64ರಡಿ ವಿಚಾರಣೆ ಮಾಡುವ ವಿಚಾರಣಾಧಿಕಾರಿ ಅಧಿನಿಯಮವನ್ನು ಪಾಲಿಸದೆ ಸಂತ್ರಸ್ತರನ್ನು ಹೆದರಿಸಿ, ಹೇಳಿಕೆಯನ್ನು ತಿರುಚಿ ಮೋಸ ಮಾಡಿದ್ದಾರೆ. ವಿಚಾರಣಾಧಿಕಾರಿಗಳು ತನಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ ಬೇರೆ ಭ್ರಷ್ಟ ಅಧಿಕಾರಿಯಿಂದ ಸಂತ್ರಸ್ತರ ವಿಚಾರಣೆ ಮಾಡಿ ಸರಕಾರದ ಆದೇಶ ಉಲ್ಲಂಘಿಸಿದ್ದಾರೆ ಎಂದು ನಾಗೇಂದ್ರ ಪುತ್ರನ್ ಕೋಟ ದೂರಿದರು.
ಆದುದರಿಂದ ಈ ಬಗ್ಗೆ ಮರು ವಿಚಾರಣೆ ಮಾಡುವಂತೆ ಉನ್ನತ ಮಟ್ಟದ ಅಧಿಕಾರಿಯವರನ್ನು ಭೇಟಿ ಮಾಡಿ ಕೇಳಿಕೊಂಡಿದ್ದೇವೆ. ಆ ಪ್ರಕಾರ ಮರು ವಿಚಾರಣೆಗೆ ಸೂಚನೆ ನೀಡುವುದಾಗಿ ಅವರು ಹೇಳಿದ್ದಾರೆ. ಆದುದರಿಂದ ಮರು ವಿಚಾರಣೆಯಲ್ಲಿ ಸಂತ್ರಸ್ತರು ತಮಗೆ ಆಗಿರುವ ಅನ್ಯಾಯವನ್ನು ಯಾವುದೇ ಭಯಭೀತಿ ಇಲ್ಲದೆ ಹೇಳಿಕೊಳ್ಳಬೇಕು ಎಂದು ಅವರು ತಿಳಿಸಿದರು.