ಉಡುಪಿ ಜಿಲ್ಲೆಯ ಮಾನವ ಸರಪಳಿಯಲ್ಲಿ ಒಂದು ಲಕ್ಷ ಜನ ಭಾಗಿ: ಜಿಲ್ಲಾಧಿಕಾರಿ ವಿದ್ಯಾಕುಮಾರಿ

Update: 2024-09-11 14:13 GMT

ಉಡುಪಿ, ಸೆ.11: ರಾಜ್ಯ ಸರಕಾರ ಸೆ.15ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ರಾಜ್ಯಾದ್ಯಂತ ನಡೆಸಲುದ್ದೇಶಿಸಿರುವ ಮಾನವ ಸರಪಳಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರದ ಶಿರೂರು ಟೋಲ್‌ಗೇಟ್‌ನಿಂದ ದಕ್ಷಿಣದ ಹೆಜಮಾಡಿ ಟೋಲ್‌ಗೇಟ್‌ವರೆಗೆ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸುಮಾರು 107ಕಿ.ಮೀ ಉದ್ದದ ಮಾನವ ಸರಪಳಿಯನ್ನು ರಚಿಸಲು ಉದ್ದೇಶಿಸಲಾಗಿದೆ. ಈ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜನತೆಗೆ ತಲುಪಿಸುವ ಉದ್ದೇಶವಿದೆ ಎಂದು ಅವರು ವಿವರಿಸಿದರು.

ಮಾನವ ಸರಪಳಿಯಲ್ಲಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಾಲೂಕು ಮಟ್ಟದ, ಗ್ರಾಪಂ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘಸಂಸ್ಥೆ ಗಳ ಮುಖಂಡರು, ಸದಸ್ಯರು, ಜಿಲ್ಲೆಯ ಶಾಲಾ-ಕಾಲೇಜುಗಳ ಬೋಧಕ, ಬೋಧ ಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಸಹಕಾರಿ, ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಸದಸ್ಯರು, ರೋಟರಿ, ಲಯನ್ಸ್, ರೆಡ್‌ಕ್ರಾಸ್ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ವಿವಿಧ ಸ್ತರದ ಜನಪ್ರತಿನಿಧಿಗಳು ಹಾಗೂ ಆಸಕ್ತ ಗಣ್ಯರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.

ಜಿಲ್ಲಾ ಮಟ್ಟದಲ್ಲಿ ಅಪರ ಜಿಲ್ಲಾಧಿಕಾರಿಯವರ ಹಾಗೂ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯ ಕ್ರಮಕ್ಕೆ ಸಿದ್ಧತೆ ನಡೆಸಲಾಗಿದ್ದು, ಮೇಲುಸ್ತುವಾರಿಗಾಗಿ ಸಮಿತಿಗಳನ್ನು ರಚಿಸಲಾಗಿದೆ ಎಂದ ಜಿಲ್ಲಾಧಿಕಾರಿ, ಇದರಲ್ಲಿ ಜಿಲ್ಲೆಯ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮ ಬೆಳಗ್ಗೆ 9:30ಕ್ಕೆ ಪ್ರಾರಂಭಗೊಳ್ಳಲಿದೆ. ಮೊದಲು ಸಂವಿಧಾನದ ಪೀಠಿಕೆ ಓದಲಾಗುವುದು. 10 ರಿಂದ 10:15ರವರೆಗೆ ಶಿರೂರಿನಿಂದ ಹೆಜಮಾಡಿಯವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ರಚನೆಯಾಗಲಿದೆ. ಉತ್ತರ ಕನ್ನಡ ಜಿಲ್ಲೆಯಿಂದ ಉಡುಪಿ ಮೂಲಕ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯನ್ನು ಈ ಸರಪಳಿ ಸಂಪರ್ಕಿಸಲಿದೆ. ರಾಜ್ಯದ ಬೀದರ್‌ನಿಂದ ಪ್ರಾರಂಭಿಸಿ ಚಾಮರಾಜನಗರ ದವರೆಗೆ ಎಲ್ಲಾ ಜಿಲ್ಲೆಗಳಲ್ಲೂ ಈ ಸರಪಳಿ ರಚನೆಯಾಗಲಿದೆ ಎಂದರು.

ಜಿಲ್ಲಾಮಟ್ಟದ ಕಾರ್ಯಕ್ರಮ ಕಿನ್ನಿಮುಲ್ಕಿಯಲ್ಲಿರುವ ಸ್ವಾಗತಗೋಪುರದ ಬಳಿ ನಡೆಯಲಿದೆ. ಇದರಲ್ಲಿ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಿನ್ನಿಮುಲ್ಕಿಯಲ್ಲಿ ಸುಮಾರು 500ಮೀ. ಉದ್ದದ ಹಾಗೂ 3ಮೀ. ಅಗಲದ ಭಾರತ ಹಾಗೂ ಕರ್ನಾಟಕ ಧ್ವಜ ಪ್ರದರ್ಶನ ನಡೆಯಲಿದೆ. ಪ್ರಜಾಪ್ರಭುತ್ವದ ಮಹತ್ವ ಸಾರುವ ಬೃಹತ್ ಬ್ಯಾನರ್‌ನ್ನು ಈಗಾಗಲೇ ಅಲ್ಲಿ ಅಳವಡಿಸಲಾಗಿದೆ ಎಂದು ಡಾ.ವಿದ್ಯಾಕುಮಾರಿ ತಿಳಿಸಿದರು.

ಡ್ರೋನ್ ಚಿತ್ರೀಕರಣ: ಜಿಲ್ಲೆಯಲ್ಲಿ ಮರವಂತೆ, ಕುಂದಾಪುರ ಟೌನ್, ಕಿನ್ನಿಮುಲ್ಕಿ, ಉಚ್ಚಿಲ ಹಾಗೂ ಇತರ ಕಡೆಗಳಲ್ಲಿ ಕಾರ್ಯಕ್ರಮದ ಡ್ರೋಣ್ ಫೋಟೊಶೂಟ್ ಮಾಡಲಾಗುವುದು. ಸಂವಿಧಾನದ ಕುರಿತು ಪ್ಲೆಕಾರ್ಡ್ ಪ್ರದರ್ಶನವೂ ನಡೆಯ ಲಿದೆ ಎಂದರು. ಮಾನವ ಸರಪಳಿ ಕುರಿತಂತೆ ಜಿಲ್ಲೆಯ ಜನತೆಗೆ ಅರಿವು ಮೂಡಿಸಲು ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನಡೆಸಲಾಗುತ್ತಿದೆ. ಆಡಿಯೋ ಜಿಂಗಲ್, ಎಸ್‌ಎಲ್‌ಆರ್ ಘಟಕದ ವಾಹನಗಳ ಮೂಲಕ ಪ್ರಚಾರ ನಡೆಸಲಾಗುತ್ತಿದೆ ಎಂದರು.

ಮಾನವ ಪರಪಳಿಯಲ್ಲಿ ಆಕರ್ಷಕ ಟ್ಯಾಬ್ಲೋ, ಯಕ್ಷಗಾನ ಸೇರಿದಂತೆ ಜಿಲ್ಲೆಯ ವಿವಿಧ ಜಾನಪದ ಕಲಾತಂಡಗಳು ಸಹ ಭಾಗವಹಿಸಲಿವೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ ಹೆಸರು ನೊಂದಾಯಿಸಿ ಕೊಂಡವರಿಗೆ ಪ್ರಮಾಣ ಪತ್ರ ವನ್ನು ನೀಡಲಾಗುವುದು. ಕಾರ್ಯಕ್ರಮ ದುದ್ದಕ್ಕೂ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಪ್ರತಿ ಕಿ.ಮೀ.ಗೊಂದರಂತೆ ಒಟ್ಟು 12 ಅಂಬುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ 107ಕಿ.ಮೀ. ಉದ್ದಕ್ಕೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಸರಪಳಿಯ ಮೇಲ್ವಿಚಾರಣೆಗೆ ಪ್ರತಿ 100ಮೀ.ಗೊಬ್ಬ ಸೆಕ್ಷನ್ ಅಧಿಕಾರಿ, ಪ್ರತಿ ಒಂದು ಕಿ.ಮೀ.ಗೊಬ್ಬ ತಾಲೂಕು ಮಟ್ಟದ ಅಧಿಕಾರಿ ಹಾಗೂ ಪ್ರತಿ 5ಕಿ.ಮೀ.ಗೊಬ್ಬ ಜಿಲ್ಲಾಮಟ್ಟದ ಅಧಿಕಾರಿಯನ್ನು ನೇಮಿಸಲಾಗಿದೆ. ಸರಪಳಿ ಹಾದುಹೋಗುವ ಮಾರ್ಗದಲ್ಲಿರುವ 34 ಗ್ರಾಪಂಗಳು ಕುಡಿಯುವ ನೀರು ಹಾಗೂ ಕಸ ವಿಲೇವಾರಿ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News