ಉಕ್ಕಿ ಹರಿಯುತ್ತಿರುವ ನದಿಗಳು: ತೀರದ ಜನರಿಗೆ ಹೈ ಅಲರ್ಟ್ ಘೋಷಣೆ

Update: 2023-07-24 15:11 GMT

ಕುಂದಾಪುರ/ಬೈಂದೂರು, ಜು.24: ಕಳೆದ ಮೂರು ನಾಲ್ಕು ದಿನಗಳಿಂದ ಉಭಯ ತಾಲೂಕುಗಳಲ್ಲಿ ಗಾಳಿ ಮಳೆಯ ಪ್ರಮಾಣ ಹೆಚ್ಚಿದ್ದು ಕಡಲು ಪ್ರಕ್ಷಿಬ್ದಗೊಂಡಿದೆ. ಪಚಗಂಗಾವಳಿ ಸಹಿತ ವಿವಿಧ ನದಿಗಳು ಉಕ್ಕಿ ಹರಿಯುತ್ತಿದ್ದು ನದಿ ತೀರದ ಜನರಿಗೆ ಹೈಅಲರ್ಟ್ ಘೋಷಿಸಲಾಗಿದೆ.

ರವಿವಾರ ತಡರಾತ್ರಿಯಿಂದಲೂ ಎಡಬಿಡದೆ ಮಳೆ ಸುರಿಯುತ್ತಿದೆ. ಶನಿವಾರ ಹಾಗೂ ರವಿವಾರದ ಮಳೆ ಹಾಗೂ ನೆರೆ ಏರಿಕೆ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಸೋಮವಾರ ಶಾಲೆ, ಪದವಿ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದ್ದ ಕಾರಣ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿತ್ತು.

ಬೈಂದೂರು ತಾಲೂಕಿನ ನಾವುಂದ, ಸಾಲ್ಬುಡ, ಕೋಣ್ಕಿ, ಮರವಂತೆ ಪ್ರದೇಶದಲ್ಲಿ ನೆರೆ ಪ್ರಮಾಣ ಸೋಮವಾರವೂ ಹೆಚ್ಚಿತ್ತು. ದಿನವಿಡೀ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಬೀಚಿಗೆ ಸೂಚನಾಫಲಕ: ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ತ್ರಾಸಿ- ಮರವಂತೆ ಬೀಚ್ ವಿವಿಧ ಕಡೆಗಳಲ್ಲಿ ಸಮುದ್ರಕ್ಕೆ ಇಳಿಯದಂತೆ ರಿಬ್ಬನ್ ಹಾಗೂ ಸೂಚನಾ ಫಲಕಗಳನ್ನು ಗಂಗೊಳ್ಳಿ ಪೊಲೀಸ್ ಇಲಾಖೆ ವತಿಯಿಂದ ಅಳವಡಿಸ ಲಾಯಿತು.

ಬೀಚ್‌ಗೆ ಆಗಮಿಸಿದ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಈ ಕುರಿತು ತಿಳುವಳಿಕೆ ನೀಡಲು ಉಪನಿರೀಕ್ಷಕ ಹರೀಶ್ ಆರ್. ನೇತೃತ್ವದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ವಕ್ವಾಡಿ ಪರಿಸರದಲ್ಲಿ ನೆರೆ: ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಾಳವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಕ್ವಾಡಿ ಪರಿಸರದಲ್ಲಿ ನೆರೆ ಉಂಟಾಗಿ ಕೃಷಿ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ.

ಈ ಪ್ರದೇಶಕ್ಕೆ ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ದಿನಗಳಲ್ಲಿ ಸೂಕ್ತ ಪರಿಹಾರದ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಕುಂದಾಪುರ ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಪಕ್ಷದ ಹಿರಿಯ ಮುಖಂಡರಾದ ವಿ.ಕೆ.ಶೆಟ್ಟಿ, ರಘುರಾಮ್ ಶೆಟ್ಟಿ, ಗ್ರಾಮ ಪಂಚಾಯತಿನ ಸದಸ್ಯ ರವಿರಾಜ್ ಶೆಟ್ಟಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News