ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಬಿಡುಗಡೆ ವಿಳಂಬ ಖಂಡಿಸಿ ಪ್ರತಿಭಟನೆ

Update: 2023-09-25 12:02 GMT

ಕುಂದಾಪುರ, ಸೆ.25: ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ಸಂಗ್ರಹವಾಗಿರುವ ಹಣ ಖರೀದಿಗೆ ಬಳಸಿಕೊಂಡು ವಿದ್ಯಾರ್ಥಿ ಗಳ ಶೈಕ್ಷಣಿಕ ಧನಸಹಾಯದಲ್ಲಿ ಕಮಿಷನ್ ನುಂಗುವ ಮಂತ್ರಿಗಳೇ ನಿಮಗೆ ನಾಚಿಕೆ ಇಲ್ಲವೇ ಎಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಕಲ್ಲಾಗರ ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಅರ್ಜಿಗೆ ಹಣ ಬಿಡುಗಡೆ ಮಾಡದೆ ಇರುವುದನ್ನು ಖಂಡಿಸಿ ಸೋಮವಾರ ಕುಂದಾಪುರದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಬಿಜೆಪಿ ಸರಕಾರದಿಂದ ಆರಂಭಗೊಂಡ ಕಲ್ಯಾಣ ಮಂಡಳಿಯ ಖರೀದಿಯ ಭ್ರಷ್ಟಾಚಾರ ಕಾಂಗ್ರೆಸ್ ಸರಕಾರದ ತನಕ ಮುಂದುವರಿದಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಕಾರ್ಮಿಕ ಮಂತ್ರಿ ತಲಾ 71000ರೂ.ನಂತೆ ಒಟ್ಟು 7000 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲು ಮಂಡಳಿ ಹಣವನ್ನು ಬಳಸಿಕೊಂಡಿದೆ. ಆದರೆ ಇದರ ನಿಜವಾದ ದರ 31000ರೂ. ಆಗಿದೆ. ಕಾರ್ಮಿಕ ಮಂತ್ರಿ ಕಳೆದ ಎರಡು ವರ್ಷಗಳಿಂದ ಬಾಕಿ ಇರುವ ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಹಣದ ಕೊರತೆ ನೆಪವೊಡ್ಡುತ್ತಿದ್ದಾರೆ ಎಂದು ಅವರು ದೂರಿದರು.

ಶಾಸ್ತ್ರೀ ಸರ್ಕಲ್ ಬಳಿಯಿಂದ ನೂರಾರು ಕಾರ್ಮಿಕರು ಪೇಟೆ ಸುತ್ತ ಮೆರವಣಿಗೆ ಹೊರಟು ಕುಂದೇಶ್ವರ ಬಳಿ ಇರುವ ಕಾರ್ಮಿಕ ನಿರೀಕ್ಷಕ ಕಚೇರಿ ಎದುರು ಧರಣಿ ನಡೆಸಿ ಕೂಡಲೇ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಅ.26-27ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾ ಗುವುದು ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ತಾಲೂಕು ಉಪಾಧ್ಯಕ್ಷ ಚಂದ್ರಶೇಖರ ವಿ ಮಾತನಾಡಿದರು. ನಿರೀಕ್ಷಕ ಕಚೇರಿ ಸಿಬ್ಬಂದಿ ಸಹನ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ, ಸಿಐಟಿಯು ಜಿಲ್ಲಾ ಮುಖಂಡ ಎಚ್.ನರಸಿಂಹ, ಕೋಶಾಧಿಕಾರಿ ಜಗದೀಶ್ ಆಚಾರ್ ಮೊದಲಾದ ವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News