ನಕಲಿ ಹಿಂದುಗಳ ಸೊಂಟ ಮುರಿದರೆ ನಿಜವಾದ ಹಿಂದುಗಳಿಗೆ ನ್ಯಾಯ ಸಿಗಲು ಸಾಧ್ಯ: ಯಶ್‌ಪಾಲ್ ಸುವರ್ಣ
ಉಡುಪಿ: ಸಂವಿಧಾನ ವಿರುದ್ಧವಾಗಿ ರಚಿಸಿರುವ ವಕ್ಫ್ ಕಾಯಿದೆಯಿಂದ ರೈತರು ಭೂಮಿ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಹಿಂದು ಧಾರ್ಮಿಕ ಕೇಂದ್ರಗಳ ಆರ್‌ಟಿಸಿಯಲ್ಲಿ ವಕ್ಫ್ ಹೆಸರು ಬರುತ್ತಿದೆ. ಇದು ಹಿಂದುಗಳನ್ನು ಧಮನಿಸುವ ಷಡ್ಯಂತ್ರ ಆಗಿದೆ. ಇದರಲ್ಲಿ ಕೇವಲ ಕಾಂಗ್ರೆಸ್ ಸರಕಾರ ಮಾತ್ರವಲ್ಲ ನಕಲಿ ಹಿಂದುಗಳು ಕೂಡ ಭಾಗಿಗಳಾಗಿದ್ದಾರೆ. ಮೊದಲು ಅವರೊಂದಿಗೆ ಸೇರಿ ಕೊಂಡಿರುವ ನಕಲಿ ಹಿಂದುಗಳ ಸೊಂಟ ಮುರಿಯ ಬೇಕಾಗಿದೆ. ಈ ಮೂಲಕ ಹಿಂದುಗಳು ಏನು ಎಂಬುದನ್ನು ತೋರಿಸಿಕೊಟ್ಟಾಗ ಈ ಹೋರಾಟಕ್ಕೆ ನಿಜವಾದ ನ್ಯಾಯ ಸಿಗುತ್ತದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಕೇವಲ ಪ್ರತಿಭಟನೆಯಲ್ಲಿ ಮಾತ್ರ ನಮಗೆ ನ್ಯಾಯ ಸಿಗಲು ಸಾಧ್ಯ ಇಲ್ಲ. ಎಲ್ಲ ಹಿಂದುಗಳು ಒಟ್ಟಾಗಿ ವಿರಮಿಸದೆ ಹೋರಾಟ ಮಾಡಬೇಕು. ಇಲ್ಲದಿದ್ದರೆ ನಮ್ಮ ದೇಶ ಹಿಂದೂ ರಾಷ್ಟ್ರವಾಗಿ ಉಳಿಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಹಿಂದು ಮನೆಯಿಂದ ಹೊರಗೆ ಬಂದು ಹೋರಾಟ ನಡೆಸಿದರೆ ಮಾತ್ರ ಹಿಂದುಗಳು ನೆಮ್ಮದಿ ಬದುಕು ನಡೆಸಲು ಸಾಧ್ಯ ಎಂದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಒಳಗೆ ನುಗ್ಗಲು ಯತ್ನಿಸಿದ ಶಾಸಕ ಯಶ್‌ಪಾಲ್ ಸುವರ್ಣ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ತಳ್ಳಾಟ ನಡೆಯಿತು. ಬಳಿಕ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಎಲ್ಲರನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಹೊರ ಕಳುಹಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮುಖಂಡರಾದ ಸತೀಶ್ ಶೆಟ್ಟಿ ಮುಟ್ಲುಪಾಡಿ, ವೀಣಾ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಗೀತಾಂಜಲಿ ಸುವರ್ಣ, ಶ್ಯಾಮಲಾ ಕುಂದರ್, ಪೃಥ್ವಿರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು̤