ಶಿರ್ವ: ಮಹಿಳೆಯ ಸಂಶಯಾಸ್ಪದ ಮೃತ್ಯು; ಮೈಮೇಲಿನ ಚಿನ್ನಾಭರಣಗಳು ನಾಪತ್ತೆ

Update: 2024-08-29 06:50 GMT

ಶಿರ್ವ, ಆ.29: ಮನೆಯಲ್ಲಿ ಒಂಟಿಯಾಗಿ ವಾಸ ಮಾಡಿಕೊಂಡಿದ್ದ ಮಹಿಳೆಯೊಬ್ಬರು ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಅವರ ಮೈಮೇಲಿನ ಚಿನ್ನಾಭರಣಗಳು ನಾಪತ್ತೆಯಾಗಿರುವುದಾಗಿ ಮೃತರ ಮಗಳು ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಬೆಳಪು ನಿವಾಸಿ ಸುಮತಿ(66) ಎಂದು ಗುರುತಿಸಲಾಗಿದೆ. ಇವರು ಮೂರು ವರ್ಷಗಳಿಂದ ಒಬ್ಬರೇ ವಾಸಿಸುತ್ತಿದ್ದು ಮಕ್ಕಳು ಆಗಾಗ್ಗೆ ಮನೆಗೆ ಬಂದು ಹೋಗುತಿದ್ದರು. ಆ.26ರಂದು ಸುಮತಿ ಅವರ ಮಗಳು ವಿಜಯ ಎಂಬವರು ತಾಯಿ ಮನೆಗೆ ಹೋಗಿ ಮಾತನಾಡಿಸಿಕೊಂಡು ಬಂದಿದ್ದು, ಆ.27ರಂದು ರಾತ್ರಿ ತಾಯಿಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮರುದಿನ ಮನೆಗೆ ಹೋಗಿ ನೋಡಿದಾಗ ಅವರು, ಮನೆಯಲ್ಲಿ ಬಿದ್ದು ಕೊಂಡಿರುವುದು ಕಂಡುಬಂದಿದ್ದು, ಕೂಡಲೇ ಸುಮತಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆ.28ರಂದು ಮಧ್ಯಾಹ್ನ ವೇಳೆ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದರು.

ತಾಯಿಯ ಮುಖವು ಊದಿಕೊಂಡಿದ್ದು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್, ಒಂದು ಜೊತೆ ಬಳೆ, ಉಂಗುರ ಇರಲಿಲ್ಲ. ಮನೆಯ ಬೇರೆ ಎಲ್ಲಾ ಸೊತ್ತುಗಳು ಯಥಾಸ್ಥಿತಿಯಲ್ಲಿವೆ. ತಾಯಿಯ ಮರಣದಲ್ಲಿ ಸಂಶಯವಿರುವುದಾಗಿ ಮಗಳು ವಿಜಯ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News