ಉಡುಪಿ ಜಿಲ್ಲಾಡಳಿತದಿಂದ ಶ್ರೀಕೃಷ್ಣ ಜಯಂತಿ ಹಬ್ಬದಾಚರಣೆ ಜೀವನೋತ್ಸಾಹಕ್ಕೆ ಕಾರಣ: ಡಾ.ವಿದ್ಯಾಕುಮಾರಿ
ಉಡುಪಿ, ಆ.26: ಶ್ರೀಕೃಷ್ಣ ಜನ್ಮಾಷ್ಠಮಿ ಜಿಲ್ಲೆಯ ಪ್ರತಿಯೊಬ್ಬರೂ ಸಂಭ್ರಮಿಸುವ ಹಬ್ಬ. ಹಬ್ಬದಾಚರಣೆ ಪ್ರತಿಯೊಬ್ಬನಲ್ಲೂ ಜೀವನೋತ್ಸಾಹ ಉಂಟುಮಾಡುತ್ತದೆ. ಗೊಲ್ಲ ಸಮುದಾಯ ನಂಬಿಕೊಂಡು ಆರಾಧಿಸುವ ದೇವರು ಶ್ರೀಕೃಷ್ಣ. ಜಾತಿ ಶ್ರೇಷ್ಠವೆನಿಸಿದ ಅಂದಿನ ಕಾಲದಲ್ಲಿ ದರ್ಶನಕ್ಕೆ ಬಂದ ಕನಕದಾಸರ ಭಕ್ತಿಗೆ ಮೆಚ್ಚಿ ತಿರುಗಿ ನಿಂತು ದರ್ಶನ ನೀಡುವ ಮೂಲಕ ಜಾತಿ, ತಾರತಮ್ಯ ಬೇಧವಿಲ್ಲದೇ ಎಲ್ಲರೂ ಸರಿಸಮಾನರು ಎಂದು ತೋರಿಸಿಕೊಟ್ಟವನು ಶ್ರೀಕೃಷ್ಣ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ವಸಿ ಮಾತನಾಡಿ,
ನಗರದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಇಂದು ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ, ಭಗವದ್ಗೀತೆಯ ತತ್ವಗಳಲ್ಲಿ ಜೀವನ ಸಾರ ಅಡಗಿದೆ. ಇದನ್ನು ಆಧುನಿಕ ಜೀವನದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಅಳವಡಿಸಿಕೊಂಡಾಗ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದರು.
ಬೆಂಗಳೂರಿನ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸದಸ್ಯೆ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕೃಷ್ಣ ಎಂದರೆ ಆಧ್ಯಾತ್ಮಿಕ ಶಕ್ತಿ. ದೇವರು ಎಂದರೆ ನಂಬಿಕೆ. ದೇವರನ್ನು ನಂಬುವುದರಿಂದ ಮಾನಸಿಕವಾಗಿ ಸುಖವಾಗಿರಲು ಸಾಧ್ಯ. ಕೃಷ್ಣನನ್ನು ಒಲಿಸಿಕೊಂಡ ಕನಕದಾಸರ ಭಕ್ತಿಯ ಪ್ರತೀಕವಾಗಿ ದರ್ಶನ ನೀಡಿದ ಸ್ಥಳವು ಕನಕನ ಕಿಂಡಿ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯುವುದರೊಂದಿಗೆ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು ಎಂದು ಮನಗಾಣುವಂತೆ ಮಾಡಿದೆ ಎಂದರು.
ಜಿಲ್ಲಾ ಯಾದವ ಗೊಲ್ಲ ಸಮಾಜ ಸಂಘದ ಅಧ್ಯಕ್ಷ ದಯಾನಂದ ಬಿ.ಆರ್ ಮಾತನಾಡಿ, ಅಧರ್ಮವನ್ನು ನಾಶಮಾಡಿ, ಧರ್ಮ ಸಂಸ್ಥಾಪನೆಗೆ ಶ್ರೀಕೃಷ್ಣ ಜನಿಸಿದ. ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ, ಅಗೋಚರ ಶಕ್ತಿ ನಮ್ಮ ಧರ್ಮ ಪರಂಪರೆಯಲ್ಲಿದೆ. ಮಕ್ಕಳಿಗೆ ಕೃಷ್ಣನ ಸಾರ, ತತ್ವಗಳನ್ನು ತಿಳಿಸುವ ಮೂಲಕ ಧರ್ಮ ಪರಂಪರೆಯನ್ನು ಉಳಿಸುವ ಕೆಲಸವಾಗಬೇಕು ಎಂದರು.
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸ ಲಾದ ಮುದ್ದು ಕೃಷ್ಣ ಮುದ್ದು ರಾಧೇ ವೇಷದ ಸ್ಫರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಸ್ಪರ್ಧೆ ಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ದರ್ಪಣ ಮಹಿಳಾ ಹುಲಿವೇಷ ತಂಡದವರು ಹುಲಿ ಕುಣಿತ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣ ಪತಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಯಾದವ ಗೊಲ್ಲ ಸಮಾಜದ ಸಂಘದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಕನ್ನಡ ಉಪನ್ಯಾಸಕ ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು.ಸರಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಇಂದಿರಾ ಬಿ ವಂದಿಸಿದರು.