ವಿದ್ಯಾರ್ಥಿಗಳು ಪ್ರಕೃತಿಯೊಂದಿಗೆ ಮುಕ್ತಮನಸ್ಸಿನ ಪ್ರೀತಿ ಬೆಳೆಸಿಕೊಳ್ಳಿ: ಸುಭಾಷ್ ಬಸು

Update: 2024-08-21 14:56 GMT

ಉಡುಪಿ: ವಿದ್ಯಾರ್ಥಿಗಳು ಪ್ರಕೃತಿಯ ಕುರಿತಂತೆ ಮುಕ್ತ ಮನಸ್ಸಿನ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದು ಮಂಗಳೂರಿನ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟ್ಯಾಕ್)ನ ಮುಖ್ಯಸ್ಥ ಸುಭಾಷ್ ಬಸು ಹೇಳಿದ್ದಾರೆ.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್‌ನ ಹೊಸ ವರ್ಷದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಹೊಸ ಸೃಜನಶೀಲ ಕಲೆಗಳ ಕುರಿತು ಇರುವ ನಮ್ಮ ಪ್ರೀತಿಗೆ ಪ್ರಕೃತಿ ಪ್ರೀತಿಯ ಸ್ಪರ್ಶ ಬೇಕು. ಎಲ್ಲಾ ಕಲೆಗಳು ಪರಸ್ಪರ ಹೆಣೆದು ಕೊಂಡಿವೆ. ಕಲೆಗಳನ್ನು ಅವುಗಳ ಸಂದರ್ಭದಲ್ಲಿ ನಾವು ಅರ್ಥ ಮಾಡಿ ಕೊಳ್ಳಬೇಕು ಎಂದು ಹೇಳಿದರು.

ಇಕೋಸೊಫಿ, ಏಸ್ತೆಟಿಕ್ಸ್, ಪೀಸ್ ಮತ್ತು ಆರ್ಟ್ ಮೀಡಿಯಾ ಇವುಗಳನ್ನು ಈ ಕಾಲದ ತುರ್ತು ಅಗತ್ಯ ಎಂದು ಹೇಳಿದ ಅವರು, ಈ ಕಾಲದ ಕಾಳಜಿಗಳನ್ನು ಜೀವಂತವಾಗಿಡುವುದರಲ್ಲಿ ಗಾಂಧಿಯನ್ ಸೆಂಟರ್ ಮತ್ತು ಅದರ ವಿದ್ಯಾರ್ಥಿಗಳ ಪಾತ್ರವನ್ನು ಶ್ಲಾಘಿಸಿದರು. ವಿದ್ಯಾರ್ಥಿಯ ಜೀವನ ಹೇಗಿರಬೇಕು ಎನ್ನುವುದಕ್ಕೆ ನೊಬೆಲ್ ಪ್ರಶಸ್ತಿ ವಿಜೇತ ಸಿ.ವಿ.ರಾಮನ್ ಅವರ ಆತ್ಮಕಥೆಯ ಭಾಗಗಳನ್ನು ಓದಿ ಹೇಳಿದರು.

ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಪ್ರಸಿದ್ಧ ವೈದ್ಯ ಹಾಗೂ ಉಡುಪಿ ಅಧಿತಿ ಆರ್ಟ್ ಗ್ಯಾಲರಿಯ ಸ್ಥಾಪಕ ಡಾ. ಕಿರಣ್ ಆಚಾರ್ಯ ಮಾತನಾಡಿ, ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕೋರ್ಸ್‌ಗಳನ್ನು ಇಷ್ಟಪಡದ ಹೊಸ ತಲೆಮಾರಿನ ಅನೇಕ ವಿದ್ಯಾರ್ಥಿಗಳು ಮುಕ್ತ ಕಲೆಗಳ ಮೂಲಕ ಸೃಜನಶೀಲ ಜೀವನದ ಅನುಭವಕ್ಕೆ ತೆರೆದುಕೊಳ್ಳುತ್ತಿದ್ದಾರೆ ಎಂದರು.

ಹಿರಿಯ ಕಲಾಪತ್ರಕರ್ತ ಎಸ್.ಆರ್. ರಾಮಕೃಷ್ಣ ಕಲಾ ಪತ್ರಿಕೋದ್ಯಮದ ಅಗತ್ಯವನ್ನು ಒತ್ತಿ ಹೇಳಿದರು. ಎಡಿನ್‌ಬರೋ ನೇಪಿಯರ್ ವಿವಿಯ ಡಾ. ಭಾಶಾಬಿ ಫ್ರೇಸರ್ ಕಲೆ ಮತ್ತು ಸಾಹಿತ್ಯದ ಶಕ್ತಿಯನ್ನು ಠಾಗೋರ್ ಅವರ ಕಾಬೂಲಿವಾಲ ಕಥೆಯನ್ನು ನೆನಪಿಸಿಕೊಂಡು ವಿವರಿಸಿದರು.

ಜಿಸಿಪಿಎಎಸ್‌ನ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಇಕೋಸೊಫಿ, ಏಸ್ತೆಟಿಕ್ಸ್ ಮತ್ತು ಪೀಸ್ ವಿದ್ಯಾರ್ಥಿಗಲ್ಲದೇ, ಎಲ್ಲರಿಗೂ ಅಗತ್ಯವಿರುವ ತುರ್ತು ಶಿಕ್ಷಣವಾಗಿದೆ ಎಂದರು. ಡಾ. ಭ್ರಮರಿ ಶಿವಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News