ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಬೇಕು: ನ್ಯಾ.ಹರಿಶಂಕರ್ ಮೆನನ್

Update: 2024-08-22 13:09 GMT

ಉಡುಪಿ, ಆ.22: ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಬೇಕು ಹಾಗೂ ಪ್ರಚಲಿತ ವಿಷಯಗಳಲ್ಲಿ ಒಳ್ಳೆಯ ಪರಿಣಿತಿಯನ್ನು ಹೊಂದಿರಬೇಕು ಎಂದು ಕೇರಳ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹರಿಶಂಕರ್ ವಿ. ಮೆನನ್ ಹೇಳಿದ್ದಾರೆ.

ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ 65ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸ್ಥಿರ ಮತ್ತು ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ಸು ಕಾಣಬೇಕು.ವಿದ್ಯಾರ್ಥಿಗಳ ಬೆಳವಣಿಗೆ ಹಾಗೂ ಸಾಧನೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ನಿರ್ದೇಶಕರಾದ ಪ್ರೊ.(ಡಾ.) ನಿರ್ಮಲ ಕುಮಾರಿ ಕೆ. ಮಾತನಾಡಿ ವಿದ್ಯಾರ್ಥಿಗಳು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯುನ್ನತ ಹುದ್ದೆಗಳಿಗೆ ಹೋಗಬೇಕು ಹಾಗೂ ನ್ಯಾಯ ಮತ್ತು ಸಮಾನತೆಗೆ ಆದ್ಯತೆ ನೀಡಬೇಕು ಎಂದರು.

ಇತ್ತೀಚೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ ಪಡೆದ ಡಾ.ಪ್ರೀತಿ ಹರೀಶ್‌ರಾಜ್ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿವಿಯಿಂದ 5 ವರ್ಷಗಳ ಬಿ.ಎ.ಎಲ್‌ಎಲ್‌ಬಿ ಪದವಿಯಲ್ಲಿ 5ನೇ ರ್ಯಾಂಕ್ ಪಡೆದ ರೋಚನಿ ರಾವ್ ಹಾಗೂ 3 ವರ್ಷದ ಎಲ್‌ಎಲ್‌ಬಿ ಪದವಿಯಲ್ಲಿ 9ನೇ ರ್ಯಾಂಕ್ ಪಡೆದ ಸುಧೀರ್ ಅವರನ್ನು ಸನ್ಮಾನಿಸಲಾಯಿತು.

ಕಾಲೇಜು ಮಟ್ಟದಲ್ಲಿ 3 ವರ್ಷದ ಎಲ್‌ಎಲ್‌ಬಿ ಪದವಿಯಲ್ಲಿ ಸಾಯಿ ವೆಂಕಟೇಶ್ ಸತೀಶ್ ಗಾಂವ್ಕರ್ ಹಾಗೂ 5 ವರ್ಷದ ಬಿ.ಎ.ಎಲ್.ಎಲ್.ಬಿ ಪದವಿಯಲ್ಲಿ ಹೆಚ್ಚು ಅಂಕ ಪಡೆದ ವಿಥಿಕ ಎಸ್ ಶೆಟ್ಟಿ ಅವರಿಗೆ ಬಂಗಾರದ ಪದಕಗಳನ್ನು ಪ್ರಧಾನ ಮಾಡಲಾಯಿತು. 30 ಮಂದಿ ದತ್ತಿ ಬಹುಮಾನಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಘುನಾಥ್ ಕೆ.ಎಸ್ ಕಾಲೇಜಿನ ವಾರ್ಷಿಕ ವರದಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ರಾವ್ ಡಿ. ಕ್ರೀಡಾ ವರದಿಯನ್ನು ನೀಡಿದರು. ವಿದ್ಯಾರ್ಥಿಗಳ ಕ್ಷೇಮಾಧಿಕಾರಿ ಸುರೇಖಾ ಕೆ. ಸ್ವಾಗತಿಸಿದರೆ, ಡಾ.ಜಯಮೋಲ್ ಪಿ.ಎಸ್ ವಂದಿಸಿದರು. ವಿದ್ಯಾರ್ಥಿನಿ ಮರಿಯಾ ಥೆರೇಸಾ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News