ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಮಾಲಕರ ಸಮಸ್ಯೆ ಸಿಎಂ ಗಮನಕ್ಕೆ: ಉಡುಪಿ ಜಿಲ್ಲಾ ಕಾಂಗ್ರೆಸ್

Update: 2023-10-01 16:03 GMT

ಉಡುಪಿ, ಅ.1: ಕಟ್ಟಡ ಸಾಮಗ್ರಿ ಸಾಗಾಟ ಮಾಡುವ ಲಾರಿ ಹಾಗೂ ಟೆಂಪೊ ಮಾಲಕರು ಎದುರಿಸುತ್ತಿರುವ ಸಮಸ್ಯೆ ಗಳನ್ನು ಈಗಾಗಲೇ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ವಿಶ್ವಾಸವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲೆಯ ಕಾಂಗ್ರೆಸ್ ನಾಯಕರಾದ ವಿನಯಕುಮಾರ್ ಸೊರಕೆ, ಗೋಪಾಲ ಪೂಜಾರಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್‌ರಾಜ್ ಕಾಂಚನ್ ಮುಂತಾದವರ ನಿಯೋಗವೊಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮನವಿ ಮಾಡಿತ್ತು ಎಂದರು.

ಒಂದೆರಡು ದಿನಗಳೊಳಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಗಣಿ ಇಲಾಖೆಯ ಕಾರ್ಯದರ್ಶಿ ಗಳೊಂದಿಎಗ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಆಶ್ವಾಸನೆಯನ್ನು ಅವರು ನೀಡಿದ್ದಾರೆ ಎಂದು ಅಶೋಕಕುಮಾರ್ ಕೊಡವೂರು ತಿಳಿಸಿದರು.

ಜಿಪಿಎಸ್ ಅಳವಡಿಕೆ ಹಾಗೂ ಪರವಾನಿಗೆ ವಿಷಯದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಬಿಜೆಪಿಯ ನಾಯಕರು ಉದ್ದೇಶಪೂರ್ವಕವಾಗಿ ಸಮಸ್ಯೆ ಸೃಷ್ಟಿಸಿ ಜಿಲ್ಲೆಯ ಲಾರಿ-ಟೆಂಪೊ ಮಾಲಕರ ದಾರಿ ತಪ್ಪಿಸುವ ಕಾರ್ಯ ಮಾಡುತಿದ್ದಾರೆ ಎಂದವರು ಆರೋಪಿಸಿದರು.

ಲಾರಿ, ಟೆಂಪೋ ಮಾಲಕರ ಮುಷ್ಕರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಬಿಜೆಪಿ ಸರಕಾರವೇ ಜಿಪಿಎಸ್ ಅಳವಡಿಕೆ ಯನ್ನು ಕಡ್ಡಾಯ ಗೊಳಿಸಿ ಆದೇಶ ಹೊರಡಿಸಿದ್ದರಿಂದಲೇ ಈ ಸಮಸ್ಯೆಗಳು ಸೃಷ್ಟಿಯಾಗಿವೆ. ಈ ಬಗ್ಗೆ ಬಿಜೆಪಿ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ಇದ್ದುದರಿಂದ ಇಂದು ಅದು ಉಲ್ಬಣಿಸಿದೆ. ಈಗ ಬಿಜೆಪಿ ನಾಯಕರು ಮೂರು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತಿದ್ದಾರೆ ಎಂದವರು ದೂರಿದರು.

ಕಾಂಗ್ರೆಸ್ ನಾಯಕರಾದ ಭಾಸ್ಕರ ರಾವ್ ಕಿದಿಯೂರು, ಕುಶಲ ಶೆಟ್ಟಿ, ಯತೀಶ್ ಕರ್ಕೇರ, ಪ್ರಖ್ಯಾತ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News