ಉಡುಪಿ ಅಂಚೆ ವಿಭಾಗದಿಂದ ತ್ರಿವರ್ಣ ಧ್ವಜ ಜನಜಾಗೃತಿ ಜಾಥ
ಉಡುಪಿ, ಆ.11: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ಯಶಸ್ಸಿಗಾಗಿ ಉಡುಪಿ ಅಂಚೆ ವಿಭಾಗವು ತ್ರಿವರ್ಣ ಧ್ವಜದ ಕುರಿತು ಜನಜಾಗೃತಿ ಜಾಥವನ್ನು ಉಡುಪಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿತ್ತು
ಉಡುಪಿ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿ ಜಾಥಕ್ಕೆ ಚಾಲನೆ ನೀಡಿದ ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು ಮಾತನಾಡಿ, ಕಳೆದ ಬಾರಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಪ್ರತಿ ಮನೆಯಲ್ಲೂ ತ್ವಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮ ಯಶಸ್ವಿ ಯಾಗುವಲ್ಲಿ ಭಾರತೀಯ ಅಂಚೆ ಇಲಾಖೆಯ ಪಾತ್ರ ಬಹಳ ಮಹತ್ತರ ವಾಗಿತ್ತು. ಆ ಸಂದರ್ಭದಲ್ಲಿ ಕಡಿಮೆ ದರದಲ್ಲಿ ಪ್ರತಿಯೊಂದು ಮನೆಗೆ ತ್ರಿವರ್ಣ ಧ್ವಜವನ್ನು ತಲುಪಿಸುವ ಕಾರ್ಯ ಮಾಡಲಾ ಗಿತ್ತು. ಉಡುಪಿ ಅಂಚೆ ವಿಭಾಗದಿಂದ 20ಸಾವಿರತ್ಕೂ ಅಧಿಕ ತ್ರಿವರ್ಣ ಧ್ವಜವನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಅದೇ ರೀತಿ ಈ ಬಾರಿಯೂ ಸ್ವಾತಂತ್ರ್ಯೋತ್ಸವವನ್ನು ಮೂರು ದಿನಗಳ ಕಾಲ ವಿಜೃಂಭಣೆ ಆಚರಿಸಲು ಇಲಾಖೆಗೆ ಸೂಚನೆ ಬಂದಿದೆ. ಅದಕ್ಕಾಗಿ ಇಲಾಖೆಗೆ ಒಟ್ಟು 22ಸಾವಿರ ತ್ರಿವರ್ಣ ಧ್ವಜ ಬಂದಿದೆ. ಅದನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಈಗಾಗಲೇ ಮಾಡಲಾಗಿದೆ. ಅದರೊಂದಿಗೆ ಈ ಕುರಿತು ಜನ ಜಾಗೃತಿ ಮೂಡಿಸಲು ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಆ.13ರಂದು ಮಧ್ಯಾಹ್ನದವರೆಗೆ ಜಿಲ್ಲೆಯ ಎಲ್ಲ ಅಂಚೆ ಕಚೇರಿಯಲ್ಲೂ ಈ ತ್ರಿವರ್ಣ ಧ್ವಜವು ಮಾರಾಟಕ್ಕೆ ಲಭ್ಯ ಇದೆ. ಧ್ವಜವೊಂದರ ಬೆಲೆ 25ರೂ. ಆಗಿದೆ. ಅದೇ ರೀತಿ ಅಂಚೆ ಇಲಾಖೆಯ ವೆಬ್‌ಸೈಟ್‌ನಿಂದ ಆನ್‌ಲೈನ್ ಮೂಲಕ ಕೂಡ ತ್ರಿವರ್ಣ ಧ್ವಜವನ್ನು ಖರೀದಿಸಬಹುದು ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ್ ವಿಠಲ ಭಟ್, ವಸಂತ್, ದಯಾನಂದ ದೇವಾಡಿಗ, ಅಂಚೆ ನಿರೀಕ್ಷಕರಾದ ಶಂಕರ ಲಮಾಣಿ, ಶಶಿಕುಮಾರ್ ಹೀರೆಮಠ, ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಗುರುಪ್ರಸಾದ್, ಉಡುಪಿ ಅಂಚೆ ವಿಭಾಗದ ಅಂಚೆ ಸಿಬ್ಬಂದಿ ಉಪಸ್ಥಿತರಿದ್ದರು.
ಉಡುಪಿ ಅಂಚೆ ಕಚೇರಿಯಿಂದ ಹೊರಟ ಜಾಥವು ಹಳೆ ಪೋಸ್ಟ್ ಆಫೀಸ್ ರಸ್ತೆ ಮೂಲಕ ಸಾಗಿ ಹಳೆ ಡಯಾನಾ ವೃತ್ತದಿಂದ ತಿರುಗಿ ಕವಿ ಮುದ್ದಣ್ಣ ಮಾರ್ಗವಾಗಿ ವಾಪಾಸು ಉಡುಪಿ ಅಂಚೆ ಕಚೇರಿಯ ಬಳಿ ಸಮಾಪನ ಗೊಂಡಿತು.