ಉಡುಪಿ: ಮಣ್ಪಾಲ್ ಕೆರೆ ಶುಚಿತ್ವ ಕಾಪಾಡಲು ಉಡುಪಿ ಜಿಲ್ಲಾಧಿಕಾರಿಗೆ ಮನವಿ
ಉಡುಪಿ: ಮಣಿಪಾಲ್ ಸಮೀಪವಿರುವ ಮಣ್ಪಾಲ್ ಕೆರೆ ಶುಚಿತ್ವ ಕಾಪಾಡುವಂತೆ ನೈಜ ಹೋರಾಟಗಾರರ ವೇದಿಕೆಯ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ ವೆಂಕಟೇಶ್ ಅವರು ಉಡುಪಿ ಜಿಲ್ಲಾಧಿಕಾರಿ ಗೆ ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಮಣ್ಪಾಲ್ ಕೆರೆಯ ಪರಿಸರ, ಪ್ರಕೃತಿ, ಮತ್ತು ಕೆರೆಯ ನೀರು ಸಾಕಷ್ಟು ಶುಚಿತ್ವವನ್ನು ಹೊಂದಿದೆ. ಆದರೆ ಕೆರೆಯ ಸುತ್ತಲಿನ ಪರಿಸರದಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್ ಕಸ, ಚಿಪ್ಸ್ ಪ್ಯಾಕೆಟ್ ಗಳು ಹಾಗೂ ಹೆಚ್ಚು ಬಿಯರ್ ಬಾಟಲ್ ಎಲ್ಲೆಂದರಲ್ಲಿ ಹಾಕಲಾಗಿದೆ. ಇದರಿಂದ ಪ್ರತಿನಿತ್ಯ ವಾಕಿಂಗ್ ಬರುವವರಿಗೆ ಪರಿಸರದ ಕಾಳಜಿ ಇದ್ದರೂ ಸಹ ಅವರು ನಿಸ್ಸಹಾಯಕ ರಾಗಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.
ಬಹಳ ಮುಖ್ಯವಾಗಿ ಅತಿ ಹೆಚ್ಚು ಜನ ಸಮಯವನ್ನು ಕಳೆಯಲು ಇಲ್ಲಿಗೆ ಬರುತ್ತಾರೆ. ಬರುವಾಗ ನೀರಿನ ಬಾಟಲ್, ತಂಪು ಪಾನೀಯದ ಬಾಟಲಗಳು, ಪ್ಲಾಸ್ಟಿಕ್ ನಲ್ಲಿರುವ ರೆಡಿಮೇಡ್ ಆಹಾರದ ಪ್ಯಾಕೆಟ್ ಗಳನ್ನು ತೆಗೆದುಕೊಂಡು ಬರುತ್ತಾರೆ. ಅಲ್ಲಿ ಸಾಕಷ್ಟು ಡಸ್ಟ್ ಬಿನ್ ಗಳಿದ್ದರೂ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಕವರ್ ಗಳನ್ನು ಬಿಸಾಕಿ ಹೋಗುತ್ತಾರೆ. ಇವರಿಗೆ ಯಾವುದೇ ತೊಂದರೆಯನ್ನು ನೀಡದೆ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ಮನವಿ ಮಾಡಿದರು.
ಇದರ ಜೊತೆ ಕೆಲವು ಕುಡುಕರು ಬಂದು ಅಲ್ಲಿ ಮೋಜು ಮಸ್ತಿ ಮಾಡಿ ಮಧ್ಯ ಕುಡಿದ ಬಾಟಲಿಗಳನ್ನು ಅಲ್ಲೇ ಎಸೆದು ಹೋಗುತ್ತಿರುವುದು ಅಲ್ಲಿ ಬಿದ್ದಿರುವ ಬಾಟಲಿಗಳೇ ಸಾಕ್ಷಿಯಾಗಿವೆ. ಇಂತಹ ಕುಡುಕರನ್ನು ಕೆರೆ ಅಂಗಳದಲ್ಲಿ ಬರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೆರೆಯ ಸುಂದರ ಪರಿಸರವನ್ನು ರಕ್ಷಿಸುವಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ತಾವು ಪ್ರಮುಖ ಪಾತ್ರ ವಹಿಸಬೇಕೆಂದು ನೈಜ ಹೋರಾಟಗಾರರ ವೇದಿಕೆಯು ತಮ್ಮಲ್ಲಿ ವಿನಯ ಪೂರ್ವಕವಾದ ಆಗ್ರಹವನ್ನು ಮಾಡುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.