ಉಡುಪಿ: ಬಂಡಾಯ ಅಭ್ಯರ್ಥಿ ರಘುಪತಿ ಭಟ್ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ

Update: 2024-05-23 08:15 GMT

ಶೋರ್ ಕುಮಾರ್ ಕುಂದಾಪುರ | ರಘುಪತಿ ಭಟ್


ಉಡುಪಿ, ಮೇ23: ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಂಡಾಯವಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ರಘುಪತಿ ಭಟ್ ವಿರುದ್ಧ ಶಿಸ್ತು ಕ್ರಮ ಜರಗಿಸುವಂತೆ ಬಿಜೆಪಿ ರಾಜ್ಯ ಘಟಕಕ್ಕೆ ಮನವಿ ಮಾಡಲಾಗಿದೆ. ಅದರಂತೆ ರಾಜ್ಯ ನಾಯಕರು ಅವರ ವಿರುದ್ಧ ಕ್ರಮ ಜರಗಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಘುಪತಿ ಭಟ್ ಅವರಿಗೆ ನಮ್ಮ ಪಕ್ಷದಿಂದ ಯಾವುದೇ ಅನ್ಯಾಯ ಆಗಿಲ್ಲ. ಪಕ್ಷದಲ್ಲಿ ಎಲ್ಲ ಜವಾಬ್ದಾರಿ ನೀಡಲಾಗಿದೆ. ಮೂರು ಬಾರಿ ಶಾಸಕರಾದ ಅವರಿಗೆ ಇತ್ತೀಚೆಗೆ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಪ್ರಭಾರಿಯಾಗಿ ನೇಮಕ ಮಾಡಲಾಗಿತ್ತು. ಹೀಗೆ ಇರುವಾಗ ಅವರಿಗೆ ಅನ್ಯಾಯ ಆಗಿದೆ ಎಂಬುದು ಶುದ್ಧ ಸುಳ್ಳು. ಮತದಾರರನ್ನು ಹಾದಿ ತಪ್ಪಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದರು.

ಬ್ರಹ್ಮಾವರ ಪಕ್ಷದ ಕಚೇರಿಯಿಂದ ಅವರ ಫೋಟೋ ತೆಗೆಸಿರುವುದು ಮತ್ತು ಶಂಕು ಸ್ಥಾಪನೆಗೆ ಕರೆಯದಿರುವ ಆರೋಪದ ಬಗ್ಗೆ ಪ್ರತ್ರಿಯಿಸಿದ ಕಿಶೋರ್ ಕುಮಾರ್, ಇದಕ್ಕೆಲ್ಲ ಬಂಡಾಯ ಉತ್ತರ ಅಲ್ಲ. ಅದಕ್ಕೆ ಪಕ್ಷದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ರಘುಪತಿ ಭಟ್ ತಾನು ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಪ್ರಕಾರ ಅದು ಬಂಡಾಯವೇ ಆಗಿದೆ ಎಂದು ಹೇಳಿದರು.

ರಘುಪತಿ ಭಟ್ ಜೊತೆ ಹೋದವರ ಬಗ್ಗೆಯೂ ಪಕ್ಷ ಗಮನಿಸುತ್ತಿದೆ. ಅವರ ವಿರುದ್ಧವೂ ಶಿಸ್ತು ಕ್ರಮವನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಾಗುವುದು ಎಂದು ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News