ಉಡುಪಿ: ಬಾಲಕಿಯ ಅಪಹರಿಸಿ ಲೈಂಗಿಕ ದೌರ್ಜನ್ಯ; ಪೋಕ್ಸೋ ಆರೋಪಿಗೆ 37ವರ್ಷಗಳ ಕಠಿಣ ಜೈಲುಶಿಕ್ಷೆ

Update: 2024-08-04 07:29 GMT

ಉಡುಪಿ, ಆ.4: ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022ರಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯವು ಒಟ್ಟು 37ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ಶನಿವಾರ ಆದೇಶ ನೀಡಿದೆ.

ಕೋಟ ನಿವಾಸಿ ಸಚಿನ್ ಪೂಜಾರಿ(26) ಶಿಕ್ಷೆಗೆ ಒಳಗಾದ ಆರೋಪಿ. ಈತ ನೊಂದ ಬಾಲಕಿಯ ಮನೆ ಕೆಲಸಕ್ಕೆ ಬರುತ್ತಿದ್ದವಳ ಸಂಬಂಧಿಕನಾಗಿದ್ದು, ಆಕೆಯಿಂದ ಬಾಲಕಿಯ ಮೊಬೈಲ್ ನಂಬರ್ ಪಡೆದುಕೊಂಡು ಮೊಬೈಲ್‌ನಲ್ಲಿ ಚಾಟಿಂಗ್ ಮಾಡಿ, ಬಾಲಕಿಯ ಅಶ್ಲೀಲ ಫೋಟೋವನ್ನು ತಯಾರಿಸಿ ಕೊಂಡಿದ್ದನು. ಅದನ್ನು ವೈರಲ್ ಮಾಡುವುದಾಗಿ ಹೆದರಿಸಿ ನೊಂದ ಬಾಲಕಿಯಿಂದ ಹಲವು ಬಾರಿ ಲಕ್ಷಾಂತರ ರೂ. ಹಣವನ್ನು ಪಡೆದುಕೊಂಡಿದ್ದನು. ಅದೇ ರೀತಿ ಚಿನ್ನಾಭರಣಗಳನ್ನು ತರಿಸಿಕೊಂಡು ಅದನ್ನು ತನ್ನ ಸ್ವಂತ ಉಪಯೋಗಕ್ಕೆ ಬಳಸಿ ಕೆಲವು ಚಿನ್ನಾಭರಣಗಳನ್ನು ಅಡವು ಇಟ್ಟಿದ್ದನು.

ನಂತರ 2020ರ ಸೆಪ್ಟೆಂಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಕೆಯನ್ನು ಎರಡು ಮೂರು ಬಾರಿ ಬಲವಂತವಾಗಿ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದು ಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು. ಬಳಿಕ ಮತ್ತೆ ಹಣ ಹಾಗೂ ಚಿನ್ನಾಭರಣ ನೀಡುವಂತೆ ಪೀಡಿಸುತ್ತಿದ್ದನು. ಮನೆಯಿಂದ ಕಾಣೆಯಾಗುತ್ತಿರುವ ಚಿನ್ನಾಭರಣ, ಹಣವನ್ನು ಮನೆಯವರು ಹುಡುಕುವಾಗ ಬಾಲಕಿ ಈ ಎಲ್ಲ ಘಟನೆಯ ಬಗ್ಗೆ ಮನೆಯವರಿಗೆ ತಿಳಿಸಿದಳು. ಅದರಂತೆ ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಮಹಿಳಾ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ಮಂಜುನಾಥ್ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಒಟ್ಟು 42 ಸಾಕ್ಷಿಗಳ ಪೈಕಿ 24 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಲಯ 50 ದಾಖಲೆಗಳನ್ನು ಪರಿಶೀಲಿಸಿತು. ನೊಂದ ಬಾಲಕಿಯ ಸಾಕ್ಷಿ ಮತ್ತು ಸಾಂಧರ್ಭಿಕ ಸಾಕ್ಷಿ ಮತ್ತು ಆರೋಪಿಯಿಂದ ವಶಪಡಿಸಲಾದ ಚಿನ್ನಾಭರಣ ಗಳಿಂದ ಇತರ ಸಾಕ್ಷಿದಾರರೂ ಕೂಡ ಅಭಿಯೋಜನೆ ಪರವಾಗಿ ಸಾಕ್ಷಿ ನುಡಿದಿದ್ದು, ಅದರಂತೆ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅಭಿಪ್ರಾಯಪಟ್ಟರು.

ಬಾಲಕಿಯನ್ನು ಅಪಹರಿಸಿದಕ್ಕೆ 5ವರ್ಷ ಕಠಿಣ ಜೈಲುಶಿಕ್ಷೆ ಮತ್ತು 5000ರೂ. ದಂಡ, ಅತ್ಯಾಚಾರಕ್ಕೆ ಸಂಬಂಧಿಸಿ 10ವರ್ಷ ಕಠಿಣ ಶಿಕ್ಷೆ ಮತ್ತು 10ಸಾವಿರ ರೂ. ದಂಡ, ಬಲವಂತವಾಗಿ ಹಣ ಮತ್ತು ಚಿನ್ನಾಭರಣ ಪಡೆದ ಪ್ರಕರಣಕ್ಕೆ ಒಂದು ವರ್ಷ ಜೈಲುಶಿಕ್ಷೆ ಮತ್ತು 3000ರೂ. ದಂಡ, ಬೆದರಿಕೆಗೆ ಒಂದು ವರ್ಷ ಜೈಲುಶಿಕ್ಷೆ ಮತ್ತು 2ಸಾವಿರ ರೂ. ದಂಡ, ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ 20ವರ್ಷ ಜೈಲುಶಿಕ್ಷೆ ಮತ್ತು 20ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು.

ದಂಡದ 40ಸಾವಿರ ರೂ. ದಂಡದ ಮೊತ್ತದಲ್ಲಿ 10ಸಾವಿರ ರೂ. ಸರಕಾರಕ್ಕೆ ಮತ್ತು 30ಸಾವಿರ ರೂ. ಸಂತ್ರಸ್ತೆಗೆ ನೀಡುವಂತೆ ಮತ್ತು ಸರಕಾರದಿಂದ ನೊಂದ ಬಾಲಕಿಗೆ 2ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಆರೋಪಿಯು ಎಲ್ಲ ಶಿಕ್ಷೆಯನ್ನು ಒಟ್ಟಾಗಿ ಅನುಭವಿಸುವಂತೆ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News