ಉಡುಪಿ: ಸೆ.9ರಿಂದ ಎಸ್‌ಡಿಎಂನಲ್ಲಿ ಚರ್ಮ, ಕೇಶರೋಗಗಳ ತಪಾಸಣಾ ಶಿಬಿರ
ಉಡುಪಿ, ಸೆ.8: ಉದ್ಯಾವರ ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಆಗಮತಂತ್ರ ವಿಭಾಗದ ನೇತೃತ್ವದಲ್ಲಿ ಸೆ.9ರಿಂದ 14ರವರೆಗೆ ಆರು ದಿನಗಳ ಕಾಲ ಆಸ್ಪತ್ರೆಯ ಚರ್ಮರೋಗ ಮತ್ತು ಸೌಂದರ್ಯ ಚಿಕಿತ್ಸಾ ಘಟಕಗಳಲ್ಲಿ ಬೃಹತ್ ಚರ್ಮ ಮತ್ತು ಕೇಶರೋಗಳ ತಪಾಸಣಾ ಶಿಬಿರ ನಡೆಯಲಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮಮತಾ ಕೆ.ವಿ. ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದ ಅವರು, ಜನರನ್ನು ಪ್ರತಿನಿತ್ಯ ಬಾಧಿಸುವ ವಿವಿಧ ರೀತಿಯ ಚರ್ಮ ವ್ಯಾದಿಗಳಾದ ಸೋರಿಯಾಸಿಸ್, ತೊನ್ನು, ಕಜ್ಜಿ, ಚರ್ಮದ ಅಲರ್ಜಿ, ಇಸುಬು, ಸರ್ಪಸುತ್ತು, ಗಜಕರ್ಣ, ಮೊಡವೆ, ತಲೆಹೊಟ್ಟು, ಹೇನಿನ ಉಪದ್ರ, ಕೂದಲು ಉದುರುವಿಕೆ, ವಿಷಜಂತುಗಳ ಕಡಿತದಿಂದ ಬರುವ ಚರ್ಮರೋಗ ಗಳಿಗೆ ಉಚಿತ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುವುದು ಎಂದರು.
ಆಸ್ಪತ್ರೆಯ ತಜ್ಞ ವೈದ್ಯರು ಚರ್ಮ ಹಾಗೂ ಕೇಶಕ್ಕೆ ಸಂಬಂಧಿಸಿದ ವ್ಯಾದಿಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಿದ್ದು, ಅರಿವು ಮೂಡಿಸುವರು. ಇದೇ ರೀತಿಯಲ್ಲಿ ಮುಂಬರುವ ದಿನಗಳಲ್ಲಿ ವಿವಿಧ ರೋಗಗಳನ್ನು ಕೇಂದ್ರೀಕರಿಸಿ ಬೃಹತ್ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು.
ಅಕ್ಟೋಬರ್‌ನಲ್ಲಿ ಬೆನ್ನುಹುರಿ ರೋಗಗಳ ಶಿಬಿ, ಡಿಸೆಂಬರ್ ತಿಂಗಳಲ್ಲಿ ವಿವಿಧ ಬಗೆಯ ವೃಣಗಳು ಮತ್ತು ಅವುಗಳ ಪರಿಹಾರೋಪಕ್ರಮಗಳ ಶಿಬಿರವನ್ನು ಆಯೋಜಿಸಲಾಗುತ್ತದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್., ಶಿಬಿರದ ಮುಖ್ಯ ಸಂಯೋಜಕಿ ಡಾ.ಚೈತ್ರಾ ಹೆಬ್ಬಾರ್ ಹಾಗೂ ಸಹ ಸಂಯೋಜಕ ಡಾ.ಶ್ರೀನಿಧಿ ಬಲ್ಲಾಳ್ ಉಪಸ್ಥಿತರಿದ್ದರು.